ತಾತ್ಕಾಳಿಕ ರಸ್ತೆ ‘ಧೂಳುಮಯ’
ಬಂಟ್ವಾಳ: ಮೂಡುಬಿದ್ರೆ ರಸ್ತೆ ನಡುವಿನ ಸೋರ್ಣಾಡು ಎಂಬಲ್ಲಿ ಕಳೆದ ಮೂರೂವರೆ ತಿಂಗಳ ಹಿಂದೆ ಸರ್ಕಾರದ ಅಪೆಂಡಿಕ್ಸ್ ಇ ಯೋಜನೆಯಡಿ ಆರಂಭಗೊಂಡ ರೂ 40ಲಕ್ಷ ವೆಚ್ಛದ ಕಿರು ಸೇತುವೆ ನಿರ್ಮಾಣ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಇಲ್ಲಿನ ತಾತ್ಕಾಲಿಕ ರಸ್ತೆ ಮಾತ್ರ ನೀರಿಲ್ಲದೆ ಸಂಪೂರ್ಣ ‘ಧೂಳುಮಯ’ಗೊಂಡಿದೆ.


ಮಾರ್ಚ್ ತಿಂಗಳೊಳಗೆ ಕಿರು ಸೇತುವೆ ನಿರ್ಮಾಣ ಪೂರ್ಣಗೊಳಿಸುವ ಭರವಸೆಯೊಂದಿಗೆ ಆರಂಭಗೊಂಡ ಕಾಮಗಾರಿ ಇದೀಗ ಭರದಿಂದಲೇ ನಡೆಯುತ್ತಿದ್ದರೂ ತಾತ್ಕಾಲಿಕವಾಗಿ ನಿರ್ಮಿಸಿದ ರಸ್ತೆಗೆ ಮಾತ್ರ ಈ ತನಕ ನೀರು ಹಾಕುವ ಗೋಜಿಗೆ ಯಾರೂ ಹೋಗಿಲ್ಲ.
ಕಳೆದ ಡಿ.10ರಂದು ಸುರಿದ ದಿಢೀರ್ ಭಾರೀ ಮಳೆಗೆ ಈ ತಾತ್ಕಾಲಿಕ ರಸ್ತೆ ಕೊಚ್ಚಿ ಹೋಗಿ ಮರುದಿನ ಮತ್ತೆ ಜೆಲ್ಲಿ ಮಿಶ್ರಿತ ಮಣ್ಣು ಹಾಕಿ ದುರಸ್ತಿಗೊಳಿಸಲಾಗಿತ್ತು. ಇದೀಗ ಮತ್ತೆ ಮಳೆ ಬರುವ ಮೊದಲೇ ಕಾಮಗಾರಿ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಕಿರುಸೇತುವೆ ಮುಕ್ತಗೊಳಿಸುವುದರ ಜೊತೆಗೆ ತಾತ್ಕಾಲಿಕ ಮಣ್ಣಿನ ರಸ್ತೆಗೆ ಸದ್ಯ ನೀರು ಹಾಕುವ ಜವಾಬ್ದಾರಿ ಗುತ್ತಿಗೆದಾರರು ಮತ್ತು ಸಂಬಂಧಪಟ್ಟ ಇಲಾಖೆ ಎಂಜಿನಿಯರ್ ಮೇಲಿದೆ ಎಂಬ ಅಭಿಪ್ರಾಯ ಇಲ್ಲಿನ ವಾಹನ ಸವಾರರದ್ದು.
ಈ ರಸ್ತೆಯಲ್ಲಿ ಪ್ರತಿದಿನ ಭಾರೀ ಸಂಖ್ಯೆಯಲ್ಲಿ ವಾಹನ ಓಡಾಟ ನಡೆಯುತ್ತಿದ್ದು, ಸೇತುವೆಯಡಿ ಸಾಕಷ್ಟು ಪ್ರಮಾಣದಲ್ಲಿ ನೀರಿನ ಒರತೆಯೂ ಸಂಗ್ರಹಗೊಂಡಿದೆ. ಈಗಾಗಲೇ ಸೇತುವೆ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಒಂದು ಬದಿ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯಬೇಕಿದೆ.
ಕಿರುಸೇತುವೆ ನಿರ್ಮಾಣ ಕಾಮಗಾರಿಗೆ ಪಂಪ್ ಮೂಲಕ ನೀರು ಹಾಯಿಸುತ್ತಿರುವ ಇಲ್ಲಿನ ಕೂಲಿ ಕಾರ್ಮಿಕರು ಧೂಳು ಹಾರಾಡುತ್ತಿರುವ ತಾತ್ಕಾಲಿಕ ಮಣ್ಣಿನ ರಸ್ತೆಗೆ ಮಾತ್ರ ಏಕೆ ನೀರು ಹಾಕುತ್ತಿಲ್ಲ ಎಂಬ ಪ್ರಶ್ನೆ ವಾಹನ ಸವಾರರನ್ನು ಕಾಡುತ್ತಿದೆ.
ಈ ಕಾಮಗಾರಿ ವೇಳೆ ಸೇತುವೆ ಬದಿ ಹಾದು ಹೋಗಿರುವ ಬಿಎಸ್ಎನ್ಎಲ್ ತಂತಿಗಳನ್ನು ಕಡಿದು ಹಾಕಿದ ಪರಿಣಾಮ ಕಳೆದ ಹಲವಾರು ದಿನಗಳಲ್ಲಿ ಇಲ್ಲಿನ ನೂರಾರು ದೂರವಾಣಿ ಮತ್ತು ಅಂತರ್ಜಾಲ ಸಂಪರ್ಕ ಸ್ಥಗಿತಗೊಂಡಿರುವ ಬಗ್ಗೆ ಬಿಎಸ್ಎನ್ಎಲ್ ವಿರುದ್ಧ ಸ್ಥಳೀಯರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದರು.
