ದೆಹಲಿ: ರೋಮಾಂಚನ ಹೆಚ್ಚಾದರೆ ಏನಾಗುತ್ತದೆ ಎಂಬುದಕ್ಕೆ ಸ್ಪೈಸ್ ಜೆಟ್ ನ ಇಬ್ಬರು ಪೈಲಟ್ ಗಳೇ ಸಾಕ್ಷಿ. ಹೋಳಿ ಹಬ್ಬವನ್ನು ಗಾಳಿಯಲ್ಲೇ ಆಚರಿಸಲು ಮುಂದಾದ ಇಬ್ಬರು ಸ್ಪೈಸ್ ಜೆಟ್ ಪೈಲಟ್ ಗಳನ್ನು ಸಂಸ್ಥೆ ಅಮಾನತು ಮಾಡಿದೆ. ಹೋಳಿಯಂದು ಹಾರಾಟದ ನಡುವೆಯೇ ಈ ಇಬ್ಬರು ಪೈಲಟ್ ಗಳು ವಿಮಾನದಲ್ಲಿ ಕುಣಿದು ಕುಪ್ಪಳಿಸಿದ್ದರು. ಮೊದಲಿಗೆ ಏರ್ ಹಾಸ್ಟೆಸ್ ಗಳು ಕುಣಿಯಲಾರಂಭಿಸಿ ಪ್ರಯಾಣಿಕರನ್ನು ಉತ್ತೇಜಿಸಿದರು. ಸ್ವಲ್ಪ ಸಮಯದ ನಂತರ ಕಾಕ್ ಪಿಟ್ ನಿಂದ ಹೊರಗೆ ಬಂದ ಪೈಲಟ್ ಕೂಡಾ ಏರ್ ಹಾಸ್ಟೆಸ್ ಗಳ ಜೊತೆ ಸೇರಿ ಕುಣಿಯಲಾರಂಭಿಸಿದ. ಇವರ ಡಾನ್ಸ್ ದೃಶ್ಯಗಳನ್ನು ಸೆರೆಹಿಡಿದ ಪ್ರಯಾಣಿಕರು ನಂತರ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟಿಸಿದ್ದರು. ಇದರ ಪರಿಣಾಮವಾಗಿ ಕರ್ತವ್ಯದ ವೇಳೆ ಬೇಜವಾಬ್ದಾರಿಯಿಂದ ವರ್ತಿಸಿದ ಪೈಲಟ್ ಗಳನ್ನು ಸಂಸ್ಥೆ ಅಮಾನತುಗೊಳಿಸಿದೆ. ಆದರೆ ವಿಮಾನದಲ್ಲಿ ಸದಾ ಇಬ್ಬರು ಪೈಲಟ್ ಗಳು ಇರುವುದುರಿಂದ ಒಬ್ಬ ಯಾವುದೋ ಕಾರಣಕ್ಕೆ ಹೊರಬಂದರೂ ಮತ್ತೊಬ್ಬ ವಿಮಾನ ಚಾಲನೆ ಮಾಡುತ್ತಿರುತ್ತಾನೆ ಎಂದು ಸಂಸ್ಥೆ ಸಮಜಾಯಿಷಿ ನೀಡಿದೆ. ಹೋಳಿಯ ಸಂದರ್ಭದಲ್ಲಿ ಜೆಟ್ ಏರ್ ವೇಸ್ ಎಂಟು ವಿಶೇಷ ವಿಮಾನಗಳನ್ನು ಹಾರಿಸಿತ್ತು. ಸದ್ಯ ಕೆಲವು ನಿಮಿಷಗಳ ರಂಗಿನಾಟ ಯುವ ಪೈಲಟ್ ಗಳ ಭವಿಷ್ಯದ ಮೇಲೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ.

