ಮಳಲಿಯಲ್ಲಿ ಒಂಥರಾ ಫೇಮಸ್ ಆದ ವ್ಯಕ್ತಿ ಈ ಮೋಣಪಣ್ಣ. ಡಿಫೆರೆಂಟ್ ಮ್ಯಾನರಿಸಂ ಹೊಂದಿರುವ ಈ ಮೋಣಪಣ್ಣ ನೋಡಲು ಸವಕಲು ಕಡ್ಡಿಯಾದ್ರೂ ತಲೆ ಮೇಲೆ ಭಾರ ಇಟ್ರೆ ಅದನ್ನು ಎಲ್ಲಿ ಬೇಕಾದ್ರೂ ಹೊತ್ತೊಯ್ಯುವ ಸಾಮಥ್ರ್ಯ ಹೊಂದಿದ್ದಾರೆ.
ಆರಂಭದಿಂದಲೇ ಯಕ್ಷಗಾನದ ಹುಚ್ಚು ಹಚ್ಚಿಕೊಂಡಿರುವ ಮೋಣಪಣ್ಣ ಅವರು ಸರಿಯಾದ ಅಭ್ಯಾಸ ಸಿಕ್ಕಿದ್ರೆ ಇಂದು ಅದೆಷ್ಟು ದೊಡ್ಡ ಕಲಾವಿದರಾಗುತ್ತಿದ್ದರೊ ಏನೋ? ಆದರೆ ಗೆಜ್ಜೆ ಕಟ್ಟುವ ಕಾಲಿಗೆ ತಲೆ(ಮರ ಏರಲು ಉಪಯೋಗಿಸುವ ಹಗ್ಗ) ಕಟ್ಟಿಕೊಂಡು ಮರ ಏರಲಾರಂಭಿಸಿದರು. ಆದರೆ ಅಲ್ಲೂ ಅದೃಷ್ಟ ನೆಟ್ಟಗಿಲ್ಲದ ಮೊಣಪಣ್ಣ ಒಂದು ದಿನ ತೆಂಗಿನ ಮರ ಹತ್ತುವ ಸಂದರ್ಭ ಮರದಿಂದ ಬಿದ್ದ ಪರಿಣಾಮ ಇದೀಗ ತಲೆಹೊರೆ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ.
ಮೋಣಪಣ್ಣನಿಗೂ ಈ ಯಕ್ಷಗಾನಕ್ಕೂ ಒಂದೊಂದು ಅವಿನಾಭಾವ ಸಮಂಬಂಧವಿದೆ. ಯಕ್ಷಗಾನ ನಡೆಯುವಲ್ಲಿ ಮೋಣಪಣ್ಣ ಬಂದರೆಂದರೆ ಸಾಕು, ಯಕ್ಷಪ್ರೇಮಿಗಳ ಹರ್ಷ ಮುಗಿಲು ಮುಟ್ಟುತ್ತದೆ.
ಭಾಗವತರು ಧೈಗುಣ ಥದಿಗಿಡು ಥೋಂ ಎಂದಾಗ ಮೋಣಪ್ಪಣ್ಣ ದಿತ್ತಾಂ ದಿತ್ತಾಂ ಎಂದು ಕಾಲೆತ್ತಿ ಕುಣಿಯಲಾರಂಭಿಸುತ್ತಾರೆ. ಆದರೆ ಮೋಣಪಣ್ಣ ಕುಣಿಯುವುದು ರಂಗಸ್ಥಳದ ಒಳಗಲ್ಲ ಹೊರಗೆ. ಇದೊಂದೇ ವ್ಯತ್ಯಾಸ ಬಿಟ್ರೆ ಯಾವ ಹಾಸ್ಯ ಯಕ್ಷಗಾನ ಕಲಾವಿದರಿಗಿಂತಲೂ ಕಡಿಮೆ ಇಲ್ಲದಂತೆ ಮನರಂಜನೆ ನೀಡುತ್ತಾರೆ.
ಯಕ್ಷಗಾನದ ಚೆಂಡೆಯ ಪೆಟ್ಟಿಗೆ ಮೋಣಪಣ್ಣನಿಗೆ ಏನಾಗುತ್ತೋ ಗೊತ್ತಿಲ್ಲ. ಅವರಷ್ಟಕ್ಕೆ ಅವರು ತನ್ನ ಪಾಡಿಗೆ ಬೆಳಗ್ಗಿನ ತನಕ ಕುಣಿಯುತ್ತಾ ಇರುತ್ತಾರೆ. ಅವರಿಂದ ಪುಕ್ಕಟೆ ಮನೋರಂಜನೆ ಸಿಗುವುದರಿಂದ ಯಾರೂ ಕೂಡಾ ಅವರಲ್ಲಿ ಈ ಬಗ್ಗೆ ಪ್ರಶ್ನಿಸುವುದಿಲ್ಲ. ಯಕ್ಷಗಾನ ಕಲಾವಿದರೂ ಕೂಡಾ ರಾಕ್ಷಸನ ಒಡ್ಡೋಲಗ ನಡೆದಾಗ ಮೋಣಪಣ್ಣನನ್ನು ಅಟ್ಟಿಸಿಕೊಂಡು ಹೋಗುವುದು ಸಾಮಾನ್ಯವಾಗಿದೆ.
ಇತ್ತೀಚೆಗೆ ಮಳಲಿಯ ಕೊಲ್ಲಬೆಟ್ಟು ಎಂಬಲ್ಲಿ ಕಟೀಲು ಮೇಳದವರ ಯಕ್ಷಗಾನ ನಡೆದ ಸಂದರ್ಭ ಮೋಣಪಣ್ಣನ ಕುಣಿತ ಬಹಳ ಚೇತೋಕಾರಿಯಾಗಿತ್ತು.
ಒಂದು ಕಾಲದಲ್ಲಿ ಕಟೀಲು ಮೇಳದ ಭಾಗವತರೊಬ್ಬರು(ಮೋಣಪಣ್ಣನ ಪ್ರಕಾರನ ಬಲಿಪರಂತೆ) ಇವರಿಗೆ ಭಾಗವತರು ತಲೆಗೆ ಕಟ್ಟುವ ರೂಮಾಲು ಕೊಟ್ಟಿದ್ದರು. ಅದನ್ನು ತಲೆಯ ಮೇಲೆ ಸುತ್ತಿಕೊಂಡು ಭಾಗವತಿಕೆಯ ಒಂದು ದಾಟಿಯನ್ನು ತೆಗೆದು ಅಬ್ಬರಿಸುತ್ತಿದ್ದರು. ಅದುಅವರ ತಲೆಯಲ್ಲಿ ಬಹಳ ಸಮಯದವರೆಗೆ ಕಾಣಿಸಿಕೊಂಡಿತ್ತು.
ಮೋಣಪಣ್ಣ ಯಕ್ಷಗಾನ ನಡೆದಾಗ ಯಾಕೆ ಕುಣಿಯುತ್ತಾರೆ ಎಂಬುವುದು ತರ್ಕವಿಲ್ಲದ ಪ್ರಶ್ನೆ. ಬಹುಶಃ ಇದಕ್ಕೆ ಉತ್ತರ ಮೋಣಪಣ್ಣನಿಗೂ ಸಹ ಗೊತ್ತಿರಲು ಸಾಧ್ಯವಿಲ್ಲ. ಚೆಂಡೆಯ ಸದ್ದನ್ನು ತಾಳಿಕೊಳ್ಳಲಾಗದ ಮೋಣಪಣ್ಣ ಸ್ವಗತ ಎಂಬಂತೆ ಕುಣಿಯುತ್ತಾ ಇರುತ್ತಾರೆ. ಊರಿನಲ್ಲಿ ಎಲ್ಲೇ ಯಕ್ಷಗಾಣ ನಡೆದರೂ ಅಲ್ಲಿ ಹಾಜರಿರುತ್ತಾರೆ. ಮನಸ್ಸು ಬಂದಗ ಅವರಷ್ಟಕ್ಕೆ ಅವರದೇ ತಾಳದಲ್ಲಿ , ಅವರದ್ದೇ ಭಂಗಿಯಲ್ಲಿ ಕುಣಿಯುತ್ತಾ ಇರುತ್ತಾರೆ.
ಅದೇನೇ ಆಗ್ಲಿ ಮೋಣಪ್ಪಣನಿಗೊಂದು ಜೈ ಹೋ ಅನ್ನೋಣವೇ?




