ಬಜ್ಪೆ: ಜಲ್ಲಿ ಹೇರಿಕೊಂಡು ಬರುತ್ತಿದ್ದ ಪಿಕ್ಅಪ್ ವಾಹನ ಪಲ್ಟಿಯಾಗಿ ಇಬ್ಬರು ಗಾಯಗೊಂಡ ಘಟನೆ ಫೆ.18ರಂದು ಗಂಜಿಮಠದಲ್ಲಿ ನಡೆದಿದೆ. ಗಾಯಗೊಂಡವರನ್ನು ಪಿಕ್ಅಪ್ ಚಾಲಕ ಜಗದೀಶ್ ಹಾಗೂ ನರಿಕೊಂಬು ನಿವಾಸಿ ಪುರುಷೋತ್ತಮ ಎಂದು ಗುರುತಿಸಲಾಗಿದೆ.
ಪುರುಷೋತ್ತಮ್ ಅವರು ಮೊಳೂರು ಗ್ರಾಮದ ಬರಿಪಟ್ಲ ಎಂಬಲ್ಲಿಗೆ ಮೇಸ್ತ್ರಿ ಕೆಲಸಕ್ಕೆ ಬಂದಿದ್ದರು. ಈ ವೇಳೆ ಜಲ್ಲಿ ಮುಗಿದಿದ್ದು ಅದನ್ನು ತರಲೆಂದು ಜಗದೀಶ್ ಎಂಬವರ ಪಿಕ್ಅಪ್ ವಾಹನದಲ್ಲಿ ಗಂಜಿಮಠಕ್ಕೆ ತೆರಳಿದ್ದರು. ಗಂಜಿಮಠದಲ್ಲಿ ಜಲ್ಲಿ ಹೇರಿಕೊಂಡು ಮತ್ತೆ ಬರಿಪಟ್ಲಕ್ಕೆ ಹಿಂದಿರುಗಿದಾಗ ಜಗದೀಶ್ ಚಲಾಯಿಸುತ್ತಿದ್ದ ಪಿಕ್ಅಪ್ ನಿಯಂತ್ರಣ ತಪ್ಪಿ ರಸ್ತೆಯ ಎಡಬದಿಗೆ ಚಲಿಸಿ 25 ಅಡಿ ಆಳಕ್ಕೆ ಬಿದ್ದಿದೆ. ಇದರಿಂದ ಪುರುಷೋತ್ತಮ್ ಅವರ ಕೋಲು ಕಾಲು, ಹಣೆ ತಲೆಯ ಹಿಂಭಾಗ, ಎದೆಯ ಬಲ ಭಾಗ, ಸೊಂಟ ಮತ್ತು ಎಡಕೋಲು ಕಾಲಿಗೆ ಗಾಯವಾಗಿದೆ. ಅದೇ ರೀತಿ ಚಾಲಕ ಜಗದೀಶ ಅವರ ತಲೆಯ ಹಿಂಭಾಗ, ಬಲ ಎದೆ ಹಾಗೂ ಸೊಂಟದ ಮೂಳೆ ಮುರಿತಗೊಂಡಿದ್ದು, ಇಬ್ಬರನ್ನೂ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಿಕ್ಅಪ್ ಚಾಲಕ ಜಗದೀಶ್ ವಿರುದ್ಧ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
