ಬಂಟ್ವಾಳ: ನಾಟಕ ಜೀವನಕ್ಕೆ ಬಹಳ ಹತ್ತಿರ, ಜೀವನವೂ ಒಂದು ರೀತಿಯ ನಾಟಕದಂತೆ, ಇಲ್ಲಿಯೂ ಪ್ರತಿಯೊಬ್ಬನೂ ಬಗೆಬಗೆಯ ಪಾತ್ರಗಳನ್ನು ನಿರ್ವಹಿಸುವ ಅನಿವಾರ್ಯತೆ ಇದೆ, ಇದನ್ನು ಯಶಸ್ವಿಯಾಗಿ ನಿಭಾಯಿಸದಲ್ಲಿ ಬದುಕಿನಲ್ಲಿ ಯಶಸ್ಸು ಕಂಡುಕೊಳ್ಳಲು ಸಾಧ್ಯ ಎಂದು ಜೇಸಿ ತರಬೇತುದಾರ, ಶಿಕ್ಷಕ ಬಿ.ರಾಮಚಂದ್ರ ರಾವ್ ಅಭಿಪ್ರಾಯಪಟ್ಟಿದ್ದಾರೆ.
ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಇದರ ಆಶ್ರಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ದ.ಕ. ಮಂಗಳೂರು ಇವರ ಸಹಯೋಗದೊಂದಿಗೆ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ಆವರಣದಲ್ಲಿ ನಡೆಯುತ್ತಿರುವ “ಪುಸ್ತಕ ಮೇಳ-ಸಾಹಿತ್ಯ ಸಂವಾದ” ದ ಎರಡನೇ ದಿನವಾದ ಮಂಗಳವಾರ ವಿದ್ಯಾರ್ಥಿಗಳಿಗೆ ಅವರು ಉಪನ್ಯಾಸ ನೀಡಿದರು.


ವಿದ್ಯಾರ್ಥಿ ಜೀವನದಲ್ಲಿಯೂ ನಾಟಕ ಸಾಕಷ್ಟು ಕಲಿಕೆಯನ್ನು ಬೆಳೆಸುತ್ತದೆ ಎಂದ ಅವರು, ನಾಟಕ-ಜೀವನ ಬೇರೆಬೇರೆಯಲ್ಲ, ಜೀವನದ ಪ್ರತಿಯೊಂದು ಸನ್ನಿವೇಶಗಳಲ್ಲೂ ಎದುರಾಗುವ ಸವಾಲುಗಳನ್ನು ಎದುರಿಸುವ ಜೀವನಕಲೆ ಮೈಗೂಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಅಪರಾಹ್ನದ ಬಳಿಕ ತರಿಕಿಟ ಕಲಾಕಮ್ಮಟ ಜ್ಯೋತಿಗುಡ್ಡೆ ಬ್ರಹ್ಮರಕೂಟ್ಲು ಇವರಿಂದ ಜಾಗೃತಿ-ಮನರಂಜನೆ ವಿಶೇಷ ಕಾರ್ಯಕ್ರಮ ನಡೆಯಿತು. ಕಮ್ಮಟದ ನಿರ್ದೇಶಕಿ ವಾಣಿಪೆರಿಯೋಡಿ ಮಾರ್ಗದರ್ಶನದಲ್ಲಿ ತಂಡದ ಸದಸ್ಯರಾದ ವಿಂಧ್ಯಾ, ಉದಯಕುಮಾರ್, ಸುನಿಲ ಜಾರಂದ ಗುಡ್ಡೆ, ಪುಷ್ಪ ಉದಯಕುಮಾರ್ ವಿದ್ಯಾರ್ಥಿಗಳಿಗೆ ಜಾಗೃತಿ ಹಾಡು-ಕಥೆ-ರೂಪಕ, ಅಭಿನಯಗಳ ಮೂಲಕ ರಂಜಿಸಿದರು.
ಕೋಶಾಧಿಕಾರಿ ಸಂದೀಪ್ ಸಾಲ್ಯಾನ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಅಧ್ಯಕ್ಷ ಮೌನೇಶ ವಿಶ್ವಕರ್ಮ ವಂದಿಸಿದರು.
ಪುಸ್ತಕಮೇಳದಲ್ಲಿ…
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತುಳುಸಾಹಿತ್ಯ ಅಕಾಡೆಮಿ, ಪುತ್ತೂರಿನ ದೀಪಾಬುಕ್ ಹೌಸ್,
ಉಗ್ಗಪ್ಪ ಪೂಜಾರಿ ಸ್ವಯಂಪ್ರಕಾಶನ, ರವಿಚಂದ್ರ ಮರ್ಧಾಳ ಹಾಗೂ ಅಕ್ಷರ ಪ್ರತಿಷ್ಠಾನ ಆಲದಪದವು ಇವರ ಪುಸ್ತಕಮಳಿಗೆಗಳು ಗಮನಸೆಳೆಯುತ್ತಿವೆ. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಮಾಹಿತಿ ದರ್ಶನ ಮಳಿಗೆ ಪುಸ್ತಕಮೇಳದ ವಿಶೇಷ ಆಕರ್ಷಣೆಯಾಗಿದೆ.
ಇಂದು ಸಮಾರೋಪ..
ಫೆ.18ರಂದು ಬೆಳಿಗ್ಗೆ ಸೃಜನಶೀಲ ಕಲಿಕೆ ಎಂಬ ವಿಷಯದ ಕುರಿತಾಗಿ ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಯವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವರು. ಬಳಿಕ ರಾಜ್ಯಪ್ರಶಸ್ತಿ ವಿಜೇತ ಕಲಾವಿದ ಕೃಷ್ಣಯ್ಯ ಲಾಲ ಮತ್ತು ಬಳಗದಿಂದ ಜಾಗೃತಿ ಗೀತ ಗಾಯನ ಕಾರ್ಯಕ್ರಮ ನಡೆಯಲಿದೆ. ಅಪರಾಹ್ನ ದ ಬಳಿಕ ಸಮಾರೋಪ ಸಮಾರಂಭ ನಡೆಯಲಿದ್ದು, ಆರೋಗ್ಯ ಸಚಿವ ಯು.ಟಿ.ಖಾದರ್ , ವಿಧಾನ ಪರಿಷತ್ ನ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾ.ಗಣೇಶ್ ಕಾರ್ಣಿಕ್ , ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು, ಪುರಸಭಾ ಅಧ್ಯಕ್ಷೆ ವಸಂತಿ ಚಂದಪ್ಪ, ಬಂಟ್ವಾಳ ಕ.ಸಾ.ಪ.ಅಧ್ಯಕ್ಷ ಜಯಾನಂದ ಪೆರಾಜೆ, ಜಿಲ್ಲಾ ಸಂಘದ ಕೋಶಾಧಿಕಾರಿ ಇಬ್ರಾಹಿಂ ಅಡ್ಕಸ್ಥಳ, ಕಾರ್ಯದರ್ಶಿ ವೆಂಕಟೇಶ್ ಬಂಟ್ವಾಳ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಚಿತ್ರ: ಪುಸ್ತಕ ಮೇಳದಲ್ಲಿ ಪುಸ್ತಕಗಳನ್ನು ವೀಕ್ಷಿಸುತ್ತಿರುವ ವಿದ್ಯಾರ್ಥಿಗಳು
ತರಿಕಿಟ ಕಲಾ ಕಮ್ಮಟದಿಂದ ಜಾಗೃತಿ ಮನರಂಜನೆ ವಿಶೇಷ ಕಾರ್ಯಕ್ರಮ ನಡೆಯಿತು.
