ಮಂಗಳೂರು: ಕಾಪುವಿನ ಕೊಪ್ಪಲಂಗಡಿ ಬಳಿ ರಾ.ಹೆ.66ರಲ್ಲಿ ಕಾರು ಮತ್ತು ಟ್ಯಾಂಕರ್ ನಡುವೆ ನಡೆದ ಮುಖಾಮುಖಿ ಢಿಕ್ಕಿಯಲ್ಲಿ ಓರ್ವ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ಸುಮಾರು 5:30ರ ವೇಳೆಗೆ ನಡೆದಿದೆ.
ಮೃತರನ್ನು ಬಜ್ಪೆ ನಿವಾಸಿ ವೃತ್ತಿಯಲ್ಲಿ ಕಾರು ಚಾಲಕರಾಗಿದ್ದ ಕೂಸಪ್ಪ ಸಾಲ್ಯಾನ್ದೆಂದು ಗುರುತಿಸಲಾಗಿದೆ. ಶುಕ್ರವಾರ ಇವರು ಉಡುಪಿಗೆ ಬಾಡಿಗೆ ಬಂದಿದ್ದ ಸಮಯದಲ್ಲಿ ಈ ದುರ್ಘಟನೆ ನಡೆದಿದೆ. ಬಾಡಿಗೆ ಮುಗಿಸಿ ಬಜ್ಪೆಯತ್ತ ಕೂಸಪ್ಪರವರು ಮರಳುತ್ತಿದ್ದಾಗ ವಿರುದ್ಧ ದಿಕ್ಕಿನಿಂದ ಬಂದ ಟ್ಯಾಂಕರ್ ಕೂಸಪ್ಪ ಚಲಾಯಿಸುತ್ತಿದ್ದ ಕಾರಿಗೆ ಮುಖಾಮುಖಿ ಢಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಕೂಸಪ್ಪರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ ರಸ್ತೆ ಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ.
ಟ್ಯಾಂಕರ್ ಚಾಲಕನ ಅಜಾಗರೂಕತೆಯಿಂದ ಅಪಘಾತ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದು, ಸಾರ್ವಜನಿಕರು ಟ್ಯಾಂಕರ್ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಪು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

