ಗುರುಪುರ : ಭಾಷೆ ಮತ್ತು ಸಂಸ್ಕೃತಿ ಅಧ್ಯಯನ ನಿಕೇತನ, ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯ ಮಂಗಳೂರು ಇದರ ಕನ್ನಡ ವಿಭಾಗ ಮತ್ತು ಗೆಳೆಯರ ಬಳ ಮಂಗಳೂರು ಜಂಟಿ ಆಶ್ರಯದಲ್ಲಿ ಅ. ೨೮ರಂದು ಸಂತ ಅಲೋಶಿಯಸ್ ಕಾಲೇಜಿನ ಸಾನಿಧ್ಯ ಸಭಾಂಗಣದಲ್ಲಿ ಸಾಹಿತಿ, ಇಂಗ್ಲಿಷ್ ಪ್ರಾಧ್ಯಾಪಕ ಶ್ರೀಧರ ಬಳಗಾರ ಅವರ ನೂತನ ಕಾದಂಬರಿ `ಬಲಿಪಾದ’ ಬಿಡುಗಡೆ ಕಾರ್ಯಕ್ರಮ ಜರುಗಿತು.

ಕೃತಿ ಅನಾವರಣಗೊಳಿಸಿದ ಸಾಹಿತಿ, ಚಿಂತಕ ಲಕ್ಷ್ಮೀಶ್ ತೋಳ್ಪಾಡಿ ಅವರು ಕೃತಿ ಬಗ್ಗೆ ಮಾತನಾಡಿ, ಉತ್ತರ ಕನ್ನಡದ ಕುಣ್ಬಿ(ಕುಡುಬಿ) ಜನಾಂಗದ ೩ ತಲೆಮಾರಿನ ಜನಜೀವನದ ವಾಸ್ತವ ಚಿತ್ರಣ ಕಾದಂಬರಿ ಕತೆಯಾಗಿದೆ. ಇಲ್ಲಿದೆ ಮುಗ್ಧ ಜನಾಂಗಂದರ ಕತೆ. ಸರಳೀಕರಣಗೊಳಿಸದೆ, ಸೈದ್ಧಾಂತಿಕತೆ ಇಲ್ಲದೆ ಅತಿ ಸುಂದರವಾಗಿ ಹೆಣೆಯಲಾದ ಕತೆ ಇದರಲ್ಲಿದ್ದು, ಓದಿದ ಮೇಲೆ ಕುಣ್ಬಿಗಳ ಜೀವನ `ಹೀಗೂ ಇತ್ತೇ’ ಎಂದು ಉದ್ಗರಿಸುವಂತಿದೆ. ಒಂದು ನಾಗರಿಕತೆ ಬಲಿಕೊಟ್ಟು ಆಧುನಿಕತೆಯ ಮೆರುಗಿಗೆ ಮೈಯೊಡ್ಡಲಾದ ವಿಸ್ತಾರ ವಿಚಾರ ಈ ಕಾದಂಬರಿಯಲ್ಲಿ ಅಡಕವಾಗಿದೆ ಎಂದು ಬಣ್ಣಿಸಿದರು.
ಕೃತಿ ಓದುತ್ತಲೇ ಅಂತರ್ಮುಖಿಯಾಗುತ್ತೇವೆ. ವಿಸ್ಮಯ, ಆಘಾತ, ಕುತೂಹಲ ಉಂಟಾಗುತ್ತದೆ. ಕೃತಿಯಲ್ಲಿ ಬರುವ ಪ್ರೇಮ ಪ್ರಸಂಗವೊಂದು ನಂಬಿಕೆಗಳನ್ನು ನಯವಾಗಿ ಧಿಕ್ಕರಿಸಿ, ಹೊಸ ದೃಷ್ಟಿಕೋನ ಬೀರುವಲ್ಲಿ ಯಶಸ್ವಿಯಾಗುತ್ತದೆ. ಕೃತಿ ಮೂಲಕ ಬಳಗಾರ ಅವರು ಕುಣ್ಬಿ ಜನಾಂಗದ ಜೀವನವನ್ನು ಓದುಗರಿಗೆ ಹತ್ತಿರವಾಗಿಸಿದ್ದಾರೆ ಎಂದು ವಿಮರ್ಶಿಸಿದರು.
ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಮಹಾಲಿಂಗ ಭಟ್ ಅವರು ಸ್ವಾಗತಿಸಿದರು. ವಿಭಾಗದ ವಿದ್ಯಾರ್ಥಿನಿ ಶ್ರೀಪೂರ್ಣ ಅವರು ತ್ರಿಪದಿ ಹಾಡುವುದರ ಮೂಲಕ ಇನ್ನೂ ತೆರೆಯದ ಕಾದಂಬರಿಯ ಪುಟಗಳೊಳಗೆ ಓದುಗರು ಪ್ರವೇಶಿಸುವಂತೆ ಮಾಡಿದರು. ಲಕ್ಷ್ಮೀಶ್ ತೋಳ್ಪಾಡಿ ಅವರು ಕುಣ್ಬಿ ಜನಾಂಗದ ಒಂದು ವಿಶಿಷ್ಟ ಸಂಪ್ರದಾಯದAತೆ ಕೃತಿ ಅನಾವರಣಗೊಳಿಸಿದರು. ಉಪನ್ಯಾಸಕ ಕ್ರಿಸ್ಟೋಫರ್ ಡಿ’ಸೋಜ(ನೀನಾಸಂ) ಅವರು ಕಾದಂಬರಿಯ ಪ್ರೇಮ ಪ್ರಸಂಗದ ಭಾಗ ವಾಚಿಸಿದರು. ಕೃತಿಕರ್ತ ಶ್ರೀಧರ ಬಳಗಾರ ಅವರು ಕಾದಂಬರಿಗೆ ಆಕರವಾಗಿರುವ ತಾನು ಕಂಡು ಕೊಂಡಿರುವ ಕುಣ್ಬಿ ಜನಾಂಗದವರ ವಾಸ್ತವ ಮತ್ತು ನೈಜ ಜೀವನದ ಬಗ್ಗೆ ಮಾಹಿತಿ ನೀಡಿದರು. ಕನ್ನಡ ವಿಭಾಗದ ವಿದ್ಯಾರ್ಥಿ ಆಕಾಶ್ ನಿರೂಪಿಸಿದರು.
