ಬಜ್ಪೆ: ತಲೆ ಹೋಳಾಗಿ ಮೆದುಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ರಕ್ತದ ಕೋಡಿಯಲ್ಲಿ ತೋಯ್ದುಕೊಂಡ ನಿಶ್ಚಲದೇಹವನ್ನು ಯುವಕನೋರ್ವ ಎಬ್ಬಿಸಲು ಪ್ರಯತ್ನಿಸುತ್ತಿರುವ ಹೃದಯವಿದ್ರಾವಕ ಚಿತ್ರಣವೊಂದು ಇಂದು ಬೆಳಿಗ್ಗೆ ಬಜ್ಪೆ ಠಾಣಾ ವ್ಯಾಪ್ತಿಯ ಸ್ವಾಮಿಲಪದವು ಎಂಬಲ್ಲಿನ ಶನೀಶ್ವರ ದೇವಸ್ಥಾನದ ಮುಂಭಾಗದಲ್ಲಿ ಕಂಡುಬಂದಿದೆ. ಇಂಥಾ ಭೀಭತ್ಸ ಘಟನೆಗೆ ಕಾರಣವಾಗಿರುವುದು ಇಂದು ಬೆಳಿಗ್ಗೆ ಸ್ವಾಮಿಲಪದವಿನಲ್ಲಿ ನಡೆದಿರುವ ಒಂದು ಭೀಕರ ಅಪಘಾತ.
ರಸ್ತೆ ಮಧ್ಯೆ ಶವವಾಗಿ ಬಿದ್ದಿರುವ ದೇಹ ಒಂದು ಹುಡುಗಿಯದ್ದಾಗಿದ್ದು ಆಕೆಯನ್ನು ಪೆರಾರ ಸಮೀಪದ ನಯನಾ (18) ಎಂದು ಗುರುತಿಸಲಾಗಿದೆ, ಈಕೆ ಬಜ್ಪೆಯ ಸೈಂಟ್ ಜೋಸೆಫ್ ಕಾಲೇಜಿನ ವಿದ್ಯಾರ್ಥಿನಿ ಎಂದು ತಿಳಿದುಬಂದಿದೆ.
ಘಟನೆಯ ವಿವರ: ಬೆಳಿಗ್ಗೆ ಲಘುಬಗೆಯಿಂದ ಕಾಲೇಜಿಗೆ ಹೊರಟಿದ್ದ ನಯನಾ ಇಂದು ಎಂದಿಗಿಂತ ಖಷಿಯಾಗಿದ್ದಳು. ಮನೆಯಲ್ಲಿ ತಿಂಡಿತೀರ್ಥ ಮುಗಿಸಿ, ಮನೆಯವರನ್ನು ಬೀಳ್ಕೊಟ್ಟು ಬೆನ್ನಿಗೆ ಬ್ಯಾಗ್ ಏರಿಸಿ ರಸ್ತೆಗಿಳಿದಿದ್ದಳು. ಅಗಡಿಯಿಂದ ಆ ದಿನ ಚಾಕಲೇಟ್ ಖರೀದಿಸಿ ತಾನೂ ತಿಂದು ಉಳಿದದ್ದನ್ನು ಮಿಕ್ಕ ಮಕ್ಕಳಿಗೂ ನೀಡಿದ್ದಳೆನ್ನಲಾಗಿದೆ. ಇದೇ ಸಮಯ ಯುವಕನೋರ್ವ ಹೊಂಡಾ ಸ್ಕೂಟರ್ನಲ್ಲಿ ಬಂದು ಕಾಲೇಜ್ವರೆಗೆ ಡ್ರಾಪ್ ಕೊಡುವುದಾಗಿ ಹೇಳಿ ತನ್ನ ಸ್ಕೂಟರನ್ನು ಆಕೆಯ ಮುಂಭಾಗದಲ್ಲಿ ನಿಲ್ಲಿಸಿದ.
ಬಸ್ನ ಹಣ ಉಳಿಯಿತು ಎಂಬ ಖುಷಿ ಒಂದಾದರೆ ಸ್ಕೂಟರ್ನಲ್ಲಿ ಹೋಗುವ ಇನ್ನೊಂದು ಖುಷಿಯಿಂದ ನಯನಾ ಸ್ಕೂಟರ್ ಏರಿ ಬಿಟ್ಟಳು. ಯುವಕ ಕೂಡಾ ಸ್ಕೂಟರನ್ನು ಸ್ವಲ್ಪ ಜೋಷ್ ಆಗಿ ಕೊಂಡೊಯ್ಯುತ್ತಿದ್ದ ಎಂದು ಸ್ಥಳೀಯರು ಅಭಿಪ್ರಾಯ. ಸ್ಕೂಟರ್ ಸ್ವಾಮಿಲಪದವು ದಾಟಿ ಕಾಲೇಜಿಗೆ ಇನ್ನೇನು ಒಂದು ಪಲರ್ಾಂಗ್ ಇರಬೇಕೆನ್ನುವಷ್ಟರಲ್ಲಿ ಅಲ್ಲಿಟ್ಟಿದ್ದ ಬ್ಯಾರಿಕೇಡ್ಗೆ ತನ್ನ ಸ್ಕೂಟರನ್ನು ಡಿಕ್ಕಿ ಹೊಡೆಸಿದ್ದಾನೆನ್ನಲಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ನಯನಾ ಸ್ಕೂಟರ್ನಿಂದ ಚಿಮ್ಮಿ ರಸ್ತೆ ಬದಿಗೆ ಬಿದ್ದಿದ್ದಾಳೆ.
ಇದೇ ಸಮಯಕ್ಕೆ ಜವರಾಯನಂತೆ ಬಂದೆರಗಿದ ಟಿಪ್ಪರ್ ಲಾರಿಯ ಚಕ್ರ ಆಕೆಯ ತಲೆಯ ಮೇಲೆಯೇ ಹಾದು ಹೋಗಿದ್ದು ಇದರಿಂದಾಗಿ ಆಕೆಯ ತಲೆ ಸ್ಥಳದಲ್ಲೇ ಹೋಳಾಗಿದ್ದು ಮೆದುಳು ಚೆಲ್ಲಾಪಿಲ್ಲಿಯಾಗಿ ಹರಡಿತ್ತು.
ಯುವತಿಯ ಸ್ಥಿತಿ ಕಂಡು ದಿಕ್ಕೆಟ್ಟಂತಾಗಿದ್ದ ಯುವಕ ಆಕೆಯ ನಿಶ್ಚಲ ದೇಹವನ್ನು ಕಂಡು ಬಿಕ್ಕಿಬಿಕ್ಕಿ ಅಳುತ್ತಿರುವ ದೃಶ್ಯ ಕರುಳು ಹಿಂಡುವಂತಿತ್ತು. ಬಜ್ಪೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಶವಾಗಾರಕ್ಕೆ ಸಾಗಿಸಲಾಗಿದ್ದು ಇಂದು ಸಂಜೆ ಅಂತ್ಯಸಂಸ್ಕಾರ ನಡೆಯಲಿದೆ. ಯುವಕ ಆಕೆಯನ್ನು ಕಟೀಲಿಗೆ ಕರೆದುಕೊಂಡು ಹೋಗಿ ಹಿಂತಿರುಗಿ ಬರುವಾಗ ಈ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಯುವಕನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ




