ಮಠದಗುಡ್ಡೆ ಸಂತ್ರಸ್ತರ ಅಳಲು
ಕೈಕಂಬ : ಮೂರು ವರ್ಷಗಳ ಹಿಂದೆ ಮಳೆಗಾಲದಲ್ಲಿ ಗುರುಪುರ ಮೂಳೂರು ಮಠದಗುಡ್ಡೆ ಸೈಟ್ ಪ್ರದೇಶದಲ್ಲಿ ಸಂಭವಿಸಿದ ಭೀಕರ ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡಿರುವ ಸುಮಾರು ೧೦ ಮನೆಯವರು ಇಂದಿಗೂ ನಿರ್ವಸತಿಗರಾಗಿದ್ದಾರೆ. ಹಲವು ಪ್ರಯತ್ನಗಳ ಫಲವಾಗಿ ಇತ್ತೀಚೆಗೆ ಸಂತ್ರಸ್ತರಿಗೆ ಮಂಜೂರಾದ ಜಾಗದಲ್ಲಿ ಸಮತಟ್ಟು ಕಾರ್ಯ ನಡೆದಿದ್ದರೂ, ಮನೆ ನಿರ್ಮಿಸಲು ಅವಕಾಶವಿಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಗುರುಪುರ ಪಂಚಾಯತ್ ಆಡಳಿತಕ್ಕೆ ದೂರು ನೀಡಿದ್ದಾರೆ.

ಈವರೆಗೂ ಸರ್ಕಾರಿ ಇಲಾಖೆಗಳು ಮತ್ತು ಜನಪ್ರತಿನಿಧಿಗಳ ಭೇಟಿಯಲ್ಲೇ ಕಾಲ ಕಳೆದಿರುವ ಸಂತ್ರಸ್ತರು ಮಾ. ೧೩ರಂದು ಗುರುಪುರ ಪಂಚಾಯತ್ ಕಚೇರಿಗೆ ಮತ್ತೊಮ್ಮೆ ಭೇಟಿ ನೀಡಿ, ಈ ಬಾರಿ ಹೇಗಾದರೂ ಮಾಡಿ ಮನೆ ನಿರ್ಮಿಸಲು ಅವಕಾಶ ಮಾಡಿಕೊಡುವಂತೆ ಪಂಚಾಯತ್ ಅಧ್ಯಕ್ಷ ಯಶವಂತ ಕುಮಾರ್ ಶೆಟ್ಟಿ ಅವರಲ್ಲಿ ಮನವಿ ಮಾಡಿಕೊಂಡರು.

ನಿವೇಶನಕ್ಕೆ ಆಕ್ಷೇಪ :
ಮೂಳೂರು ಮಠದಗುಡ್ಡೆಯ ಸರ್ವೇ ನಂಬ್ರ ೧೦೨ರಲ್ಲಿ ೪೪ ಸೆಂಟ್ಸ್ ಜಾಗದಲ್ಲಿ ಸಂತ್ರಸ್ತರಿಗೆ ೧೦ ಮನೆ ನಿರ್ಮಿಸಲು ಕಂದಾಯ ಇಲಾಖೆ ಅನುಮತಿ ನೀಡಿದ್ದು, ಜಾಗ ಸಮತಟ್ಟುಗೊಳಿಸುವ ಸಂದರ್ಭದಲ್ಲಿ ಸ್ಥಳೀಯರು ರಾಜ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದು ಜಾಗದ ಬಗ್ಗೆ ಆಕ್ಷೇಪ ಸಲ್ಲಿಸಿ, ನೀರಿನ ಒರತೆ ಇರುವ ಜಾಗದಲ್ಲಿ ಮನೆ ನಿರ್ಮಿಸಿದರೆ ಮೇಲ್ಗಡೆ ಇರುವ ಮನೆಗಳಿಗೆ ಅಪಾಯವಿದೆ ಎಂದಿದ್ದರು.
ಆಕ್ಷೇಪದನ್ವಯ, ಮನೆ ನಿರ್ಮಿಸುವ ಮುಂಚೆ ಜಾಗದ ಸುತ್ತಲ ಪ್ರದೇಶದಲ್ಲಿ ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಕಂದಾಯ ಇಲಾಖೆಗೆ ಸರ್ಕಾರ ಸೂಚಿಸಿತ್ತು. ಜಂಟಿ ಸಮೀಕ್ಷೆ ನಡೆದು ಕೆಲವು ದಿನಗಳು ಕಳೆದರೂ, ಗಣಿ ಇಲಾಖೆಯು ಪಂಚಾಯತ್ ಕಚೇರಿಗೆ ಸಮೀಕ್ಷಾ ವರದಿ ರವಾನಿಸದೆ ವಿಳಂಬ ನೀತಿ ಅನುಸರಿಸಿದೆ ಎಂಬ ಆರೋಪ ಕೇಳಿ ಬಂದಿದೆ.
ತಕ್ಷಣ ವರದಿ ರವಾನೆ
ಪಂಚಾಯತ್ ಕಚೇರಿ ಎದುರು ಮಾ. ೧೩ರಂದು ಮುಹಮ್ಮದ್ ಯಾನೆ ಮೋನು, ಇಸ್ಮಾಯಿಲ್ ಜಿ ಎಚ್, ಜಯಮ್ಮ, ಅಪೋಲಿನ್ ಡಿ’ಸೋಜ, ಅಶ್ರಾಫ್, ಸಕಿನಾ, ನೆಫಿಸಾ, ತಾಯಿರಾ, ಲತಾ, ಚಂದ್ರಾವತಿ ಮತ್ತಿತರ ಸಂತ್ರಸ್ತರು ಪ್ರತಿಭಟನೆ ನಡೆಸಲು ಮುಂದಾದಾಗ, ಪಂಚಾಯತ್ ಅಧ್ಯಕ್ಷರು ಗಣಿ ಇಲಾಖೆಗೆ ಕರೆ ಮಾಡಿ ವರದಿ ಕಳುಹಿಸುವಂತೆ ಸೂಚಿಸಿದರು. ಆಗ ಇಲಾಖಾ ಅಧಿಕಾರಿಗಳು ಉಡಾಫೆಯಿಂದ ಮಾತನಾಡಿದ್ದು, ಮೇಲಧಿಕಾರಿಗಳಿಗೆ ದೂರು ನೀಡಲಾಗುವುದು ಎಂದಾಗ ತಕ್ಷಣ ವರದಿ ಮೇಲ್ ಮಾಡಿದ್ದಾರೆ.
ಪಂಚಾಯತ್ ಅಧ್ಯಕ್ಷ ಯಶವಂತ ಕುಮಾರ್ ಶೆಟ್ಟಿ ಅವರು ಈ ವರದಿಯಾಧರಿಸಿ ಸಂತ್ರಸ್ತರೊAದಿಗೆ ಮಾತನಾಡಿ, ಗಣಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಕೆಲವು ದಿನಗಳ ಹಿಂದೆ ಜಂಟಿ ಸಮೀಕ್ಷೆ ನಡೆಸಿದ್ದು, ಈಗಾಗಲೇ ವರದಿ ನೀಡಬೇಕಿತ್ತು. ಇಂದು(ಮಾ. ೧೩) ವರದಿ ಕೇಳಿದಾಗ ನಮ್ಮಲ್ಲಿ ಮೊಬೈಲ್ ಇಲ್ಲ. ಲ್ಯಾಂಡ್ ಲೈನ್ ಇರುವುದು. ಅಂಚೆ ಮೂಲಕ ವರದಿ ಕಳುಹಿಸಲಾಗುವುದು ಎಂಬಿತ್ಯಾದಿಯಾಗಿ ಹಾರಿಕೆಯ ಉತ್ತರ ನೀಡಿದರು. ಮತ್ತೂ ಮಾತು ಮುಂದುವರಿಸಿದಾಗ ವರದಿಯನ್ನು ಮೇಲ್ ಮಾಡಿದ್ದಾರೆ. ಸಂತ್ರಸ್ತರಿಗೆ ಮನೆಯಾಗಬೇಕು. ಈ ವರದಿಯಂತೆ ಜಿ.ಪಂ ಇಂಜಿನಿಯರ್, ವಾರ್ಡ್ ಸದಸ್ಯರು ಹಾಗೂ ಪಂಚಾಯತ್ ಪಿಡಿಒ ಅವರೊಂದಿಗೆ ಮಾತುಕತೆ ನಡೆಸಿ, ಸಮತಟ್ಟುಗೊಳಿಸಲಾದ ಜಾಗದಲ್ಲಿ ಶೀಘ್ರ ಮನೆ ನಿರ್ಮಿಸಲು ಕ್ರಮ ಕೈಗೊಳ್ಳುವೆ ಎಂದರು.
