ಇಸ್ಲಾಮಾಬಾದ್ : ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಶುಕ್ರವಾರ ರಾತ್ರಿ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು, ಕಾಶ್ಮೀರ ವಿವಾದ ಬಗೆಹರಿಸಲು ಭಾರತದ ಜತೆ ಮಾತುಕತೆ ನಡೆಸುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
‘ಕಾಶ್ಮೀರ ವಿವಾದ ಇತ್ಯರ್ಥಪಡಿಸಲು ನಿರಂತರವಾಗಿ ಪ್ರಯತ್ನಗಳು ನಡೆಯುತ್ತಿವೆ. ಮತ್ತೊಂದು ಸುತ್ತಿನ ಮಾತುಕತೆ ಮೂಲಕ ಇದು ಬಗೆಹರಿಯುವುದಾದರೆ ನಾವು ಸಿದ್ಧರಿದ್ದೇವೆ. ಇದರಿಂದ ಖಂಡಿತವಾಗಿಯೂ ಭಾರತ ಮತ್ತು ಪಾಕ್ ನಡುವೆ ಶಾಂತಿ, ಸ್ಥಿರತೆ ಮೂಡುತ್ತದೆ. ಆರ್ಥಿಕ ಸಹಕಾರ ವಿಸ್ತರಣೆಯಾಗುತ್ತದೆ’ ಎಂದು ಷರೀಫ್ ಹೇಳಿರುವುದಾಗಿ ಪಾಕ್ ಪತ್ರಿಕೆ ‘ಡಾನ್’ ಶನಿವಾರ ವರದಿ ಮಾಡಿದೆ.
ಭಾರತದ ಗಣರಾಜ್ಯೋತ್ಸವ (ಜ. 26) ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಬರಲು ಒಬಾಮ ಒಪ್ಪಿಗೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಒಬಾಮ ಪಾಕ್ ಪ್ರಧಾನಿ ಜತೆಗೆ ಕಾಶ್ಮೀರ ವಿಷಯ ಪ್ರಸ್ತಾಪ ಮಾಡಿರುವುದು ಮಹತ್ವ ಪಡೆದುಕೊಂಡಿದೆ. ಒಬಾಮ ಭಾರತ ಭೇಟಿಯನ್ನು ಷರೀಫ್ ಕೂಡ ಸ್ವಾಗತಿಸಿದ್ದಾರೆ. ಭಾರತ ಮತ್ತು ಪಾಕ್ ನಡುವಿನ ಸಂಬಂಧ ಸುಧಾರಿಸುವ ನಿಟ್ಟಿನಲ್ಲಿ ಒಬಾಮ ನೀಡಿರುವ ಸಲಹೆಯನ್ನು ಪರಿಶೀಲಿಸುವುದಾಗಿಯೂ ಅವರು ಹೇಳಿದ್ದಾರೆ.
ಆದರೆ, ಅಂತರರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಬಳಿ ಆಗಾಗ್ಗ ನಡೆಯುತ್ತಿರುವ ಅಪ್ರಚೋದಿತ ಗುಂಡಿನ ದಾಳಿ ಮತ್ತು ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆಯನ್ನು ಭಾರತ ರದ್ದುಗೊಳಿಸಿರುವುದು, ಶಾಂತಿ ಮಾತುಕತೆ ಪ್ರಯತ್ನಗಳಿಗೆ ತುಸು ಹಿನ್ನಡೆ ತಂದಿದೆ ಎಂದೂ ಷರೀಪ್ ಒಬಾಮ ಬಳಿ ಅಸಮಾಧಾನ ವ್ಯಕ್ತಪಡಿಸಿರುವುದಾಗಿ ಪತ್ರಿಕೆ ವರದಿ ಹೇಳಿದೆ.

