ನ್ಯೂಯಾರ್ಕ್: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮೆರಿಕ ಭೇಟಿಯ ಸಂದರ್ಭದಲ್ಲಿ ನೀಡಿದ್ದ ರಾಜತಾಂತ್ರಿಕ ವಿನಾಯ್ತಿಯ ಕುರಿತು ವಿವರಣೆ ನೀಡುವಂತೆ ಅಮೆರಿಕದ ಫೆಡರಲ್ ಕೋರ್ಟ್ ಅಲ್ಲಿನ ವಿದೇಶಾಂಗ ವ್ಯವಹಾರಗಳ ಇಲಾಖೆಗೆ ಸೂಚಿಸಿದೆ.
ನ್ಯೂಯಾರ್ಕ್ ಮೂಲದ ಮಾನವ ಹಕ್ಕುಗಳ ಸಂಸ್ಥೆ ಅಮೆರಿಕನ್ ಜಸ್ಟೀಸ್ ಸೆಂಟರ್ (ಎಜೆಸಿ) ಈ ವಿಚಾರವಾಗಿ ಕೋರ್ಟ್ ಮೆಟ್ಟಿಲೇರಿತ್ತು.
2002ರ ಗುಜರಾತ್ ಕೋಮುದಳ್ಳುರಿಯಲ್ಲಿ ಮೋದಿ ಅವರ ಕೈವಾಡ ಇದೆ. ಇಡೀ ಮನುಕುಲ ವಿರೋಧಿಯಾಗಿ ಅವರು ಅಪರಾಧ ಎಸಗಿದ್ದಾರೆ ಎಂದು ‘ಎಜೆಸಿ’ ಕೋರ್ಟ್‌ಗೆ ಸಲ್ಲಿಸಿದ್ದ 28 ಪುಟಗಳ ದೂರಿನಲ್ಲಿ ಆರೋಪಿಸಿತ್ತು. ಇದನ್ನು ಅಧರಿಸಿ ಕೋರ್ಟ್ ಮೋದಿ ಅವರಿಗೆ ಸಮನ್ಸ್ ಕೂಡ ಜಾರಿ ಮಾಡಿತ್ತು.
ಆದರೆ, ಸಮನ್ಸ್ ಜಾರಿಯಲ್ಲಿದ್ದರೂ, ಅಮೆರಿಕ ಭೇಟಿಯ ಸಂದರ್ಭದಲ್ಲಿ ಮೋದಿ ಅವರಿಗೆ ರಾಜತಾಂತ್ರಿಕ ವಿನಾಯ್ತಿ ನೀಡಲಾಗಿತ್ತು. ಇದೀಗ ಅವರ ವಿರುದ್ಧ ವಿಚಾರಣೆಯೂ ನಡೆಯುತ್ತಿಲ್ಲ. ಈ ಕುರಿತು ಕಾನೂನುಬದ್ಧ ಸ್ಪಷ್ಟನೆ ನೀಡಬೇಕು ಎಂದು ‘ಎಜೆಸಿ’ ಕಳೆದ ವಾರ ಮತ್ತೆ ಕೋರ್ಟ್‌ನಲ್ಲಿ ಮನವಿ ಮಾಡಿತ್ತು. ಇದರ ವಿಚಾರಣೆ ನಡೆಸಿದ ಕೋರ್ಟ್, ಈ ಕುರಿತು ಡಿಸೆಂಬರ್ 10ರ ಒಳಗಾಗಿ ವಿವರಣೆ ನೀಡುವಂತೆ ವಿದೇಶಾಂಗ ವ್ಯವಹಾರಗಳ ಇಲಾಖೆಗೆ ಸೂಚನೆ ನೀಡಿದೆ.
‘ಎಜೆಸಿ’ ಮತ್ತು ಗುಜರಾತ್ ಗಲಭೆಯಲ್ಲಿ ಬದುಕುಳಿದ ಇಬ್ಬರು ವ್ಯಕ್ತಿಗಳು ಮೋದಿ ವಿರುದ್ಧ ಕೋರ್ಟ್ ಮೊರೆ ಹೋಗಿದ್ದಾರೆ.

