ಮುಂಬಯಿ : ಕನ್ನಡ ಭಾಷೆ ಅಳಿಯುವ ಭೀತಿ ಇದೆ ಎನ್ನುವ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸುತ್ತಿದ್ದಾರೆ. ಅಂತಹ ಆತಂಕದ ಅವಶ್ಯಕತೆಯಿಲ್ಲ. ಎರಡೂವರೆ ಸಾವಿರ ಇತಿಹಾಸವಿರುವ ಕನ್ನಡ ಭಾಷೆಯ ಬೇರುಗಳು ಗಟ್ಟಿಯಾಗಿವೆ. ಅದು ಎಂತಹ ಬಿರುಗಾಳಿಯನ್ನು ತಡೆದುಕೊಳ್ಳಬಲ್ಲದು. ಕಾಲಕಾಲಕ್ಕೆ ಒಂದಷ್ಟು ಬದಲಾವಣೆಯನ್ನು ಕಾಣಬಹುದಷ್ಟೆ. ಭಾಷೆ ಗಟ್ಟಿಯಾಗಲು ಅದರ ಅವಶ್ಯಕತೆ ಇರುತ್ತದೆ. ಸಾಹಿತ್ಯ ರಚನೆ ಆ ಭಾಷೆಗೆ ಪುನಶ್ಚೇತನ ನೀಡುವ ಮಾದ್ಯಮ. ಕನ್ನಡದಲ್ಲಿ ಸಾಹಿತ್ಯ ರಚನೆ ಅಗಾದ ಪ್ರಮಾಣದಲ್ಲಿ ನಿರಂತರವಾಗಿ ನಡೆಯುತ್ತಿದೆ, ಇದು ಕನ್ನಡದ ಅಸ್ತಿತ್ವವನ್ನು ಮತ್ತಷ್ಟು ಬಲಿಷ್ಠವಾಗಿ ಸಾಗುತ್ತಿದೆ ಎಂದು ದ.ಕ. ಜಿಲ್ಲಾ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಹೆಚ್ ಕೆ. ಅಭಿಪ್ರಾಯಪಟ್ಟರು.

ಮಂಗಳೂರುನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಹೃದಯವಾಹಿನಿ ಮಂಗಳೂರು ಮತ್ತು ಲಯನ್ಸ್ ಕ್ಲಬ್, ಸ್ಮಾರ್ಟ್ ಸಿಟಿ ಮಂಗಳೂರು ಜಂಟಿ ಆಶ್ರಯದಲ್ಲಿ ಜರುಗಿದ 16ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ನಾಲ್ಕು ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ಸಮಾರಂಭದ ದಿ.ಎಸ್.ಕೆ. ಹಳೆಯಂಗಡಿ (ಬರೋಡ) ವೇದಿಕೆಯಲ್ಲಿ ಭದ್ರಾವತಿ ರಾಮಾಚಾರಿ ನಿರೂಪಣೆಯ ಪ್ರತಿಬಿಂಬ, ಡಾ.ಶ್ರೀನಿವಾಸ್ ಸಿಮೂರ್ಕರ್ ಅವರ ಬೀಕನ್ ಪಬ್ಲಿಕ್ ಲೈಬ್ರರಿ, ಡಾ. ಸತೀಶ್ ಕುಮಾರ್ ಎಸ್. ಹೊಸಮನಿ ಅವರ ಡಿಜಿಟಲ್ ಲೈಬ್ರರಿ ಟುಡೇ, ಮಹೇಶ್ ಕುಲಕರ್ಣಿ ಅವರ ವಿಶ್ವ ವಿಜೇತ ಕೃತಿಗಳನ್ನು ಬಿಡುಗಡೆ ಗೊಳಿಸಲಾಯಿತು.
ಸಮ್ಮೇಳನಾಧ್ಯಕ್ಷ ಡಾ. ಸತೀಶ್ ಕುಮಾರ್ ಹೊಸಮನಿ ಮಾತನಾಡಿ ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಇಲಾಖೆ ಆಧುನಿಕರಣಗೊಂಡಿದೆ, ಡಿಜಿಟಲ್ ಗ್ರಂಥಾಲಯದ ಮಾದರಿಯನ್ನು ಇತರ ರಾಜ್ಯಗಳು ಅನುಸರಿಸಬೇಕು ಎಂದು ಕೇಂದ್ರ ಸರ್ಕಾರದ ಮಾರ್ಗಸೂಚಿ ಇದೆ. ಇದು ನಮಗೆ ರಾಷ್ಟ್ರ ಮಟ್ಟದಲ್ಲಿ ದೊರೆತ ಶ್ರೇಷ್ಠ ಗೌರವವಾಗಿದೆ ಎಂದರು.
ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕರಾದ ವೇದವ್ಯಾಸ ಕಾಮತ್, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಸಮ್ಮೇಳನ ಸಮಿತಿಯ ಗೌರವಾಧ್ಯಕ್ಷ ಚಿತ್ತರಂಜನ್ ಬೋಳೂರು ಮುಂತಾದ ಗಣ್ಯರ ವೇದಿಕೆಯಲ್ಲಿದ್ದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ. ಸಿಪ್ರಿಯನ್ ಮೊಂತೇರೊ, ಮಹಾವೀರ್ ಜೈನ್, ಹೊಳೆಯಪ್ಪ ಹೆಚ್., ಶ್ರೀಮತಿ ಮಮತಾ ಕೇಶವ, ಗೋ.ನಾ ಸ್ವಾಮಿ ಬೆಂಗಳೂರು, ದಿವಾಕರ ಶೆಟ್ಟಿ, ಪಿ. ಕೆ. ಮಂಗಳೂರು, ಗೋಪಾಲಕೃಷ್ಣ ಕೆ. ಬಜ್ಪೆ, ಕೃಷ್ಣಪ್ಪ ಗೌಡ ಪಡ್ಡಂಬೈಲ್ ಅವರುಗಳಿಗೆ ಹೃದಯವಂತರು – 2022 ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಮ್ಮೇಳನ ಸಮಿತಿ ಸ್ಥಾಪಕ ಅಧ್ಯಕ್ಷ ಕೆ.ಪಿ.ಮಂಜುನಾಥ್ ಸಾಗರ್ ಸ್ವಾಗತಿಸಿದರು. ಪ್ರತಿತ ಪ್ರಿಯಾ ಮೊಂತೇರೊ ಕಾರ್ಯಕ್ರಮ ನಿರೂಪಿಸಿದರು.
ಜಿ.ಕೆ. ಹರಿಪ್ರಸಾದ್ ಧನ್ಯವದಿಸಿದರು.
