ಕೈಕಂಬ : ಬಕ್ರೀದ್ ಹಬ್ಬಕ್ಕಾಗಿ ಅಕ್ರಮವಾಗಿ ಕೋಣ ಕಡಿದು ಮಾಂಸ ಸಿದ್ಧಪಡಿಸುತ್ತಿದ್ದ ಗಂಜಿಮಠ ಪಂಚಾಯತ್ ವ್ಯಾಪ್ತಿಯ ಬಡಗುಳಿಪಾಡಿ ಗ್ರಾಮದ ಮಳಲಿ ಕ್ರಾಸ್ ಬಳಿಯ ಮನೆಯೊಂದಕ್ಕೆ ಬಜ್ಪೆ ಪೊಲೀಸರು ಜು.10ರಂದು ಭಾನುವಾರ ಬೆಳಿಗ್ಗೆ ದಾಳಿ ಮಾಡಿ ಅದಾಗಲೇ ವಧಿಸಲ್ಪಟ್ಟ ಒಂದು ಕೋಣ, ಕೋಣದ ಮಾಂಸ, ಚೂರಿ, ಕತ್ತಿ ಸಹಿತ ಹಲವು ಸೊತ್ತು ವಶಪಡಿಸಿಕೊಂಡಿದ್ದಾರೆ.
ಪೊಲೀಸ್ ದಾಳಿ ಅರಿತ ಮನೆ ಮಾಲಕ ಆರೋಪಿ ಯೂಸೂಫ್, ಆತನ ಸಹೋದರ ಹಕೀಂ ಮತ್ತು ಸಂಬಂಧಿ ಸಿರಾಜ್ ಪರಾರಿಯಾಗಿದ್ದಾರೆ. ಎಲ್ಲಿಂದಲೋ ಕಳುವು ಮಾಡಿ ತಂದ ಕೋಣ ಇದಾಗಿದೆ ಎಂದು ಪ್ರಕರಣದಲ್ಲಿ ಉಲ್ಲೇಖಿಸಿದ್ದಾರೆ.
ಮಳಲಿ ಕ್ರಾಸ್ನಿಂದ ಮಳಲಿಯತ್ತ ಹೋಗುವ ರಸ್ತೆಯಲ್ಲಿರುವ ಮನೆಯೊದರಲ್ಲಿ ಅಕ್ರಮವಾಗಿ ಕೋಣನ ವಧಿಸಿ ಮಾಂಸ ಮಾರಾಟ ಮಾಡಲಾಗುತ್ತದೆ ಎಂಬ ಖಚಿತ ಮಾಹಿತಿಯನ್ವಯ ಪಿಎಸ್ಐ ಪೂವಪ್ಪ ಮತ್ತು ರಾಜೇಶ್ ಅವರಿದ್ದ ಪೊಲೀಸ್ ತಂಡ ಬೆಳಿಗ್ಗೆ ೯ ಗಂಟೆಗೆ ನಿರ್ದಿಷ್ಟ ಮನೆಗೆ ದಾಳಿ ಮಾಡಿದೆ. ಪೊಲೀಸರನ್ನು ಕಂಡ ಆರೋಪಿಗಳು ಕುತ್ತಿಗೆ ಕೊಯ್ದ ಕೋಣವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಸುಮಾರು ೩೦,೦೦೦ ರೂ ಮೌಲ್ಯದ ಕೋಣ ಮತ್ತು ಕೋಣದ ಮಾಂಸ, ೨ ಚೂರಿ, ನೈಲಾನ್ ಹಗ್ಗ, ಎರಡು ಕತ್ತಿ ಮತ್ತು ಮರದ ದಿಮ್ಮಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಠಾಣೆಯಲ್ಲಿ ಮಹಜರು ನಡೆಸಿದ ಬಳಿಕ ಅದಾಗಲೇ ಮೃತಪಟ್ಟಿದ್ದ ಕೋಣವನ್ನು ದಫನ ಮಾಡಲಾಗಿದೆ.
ಆಸ್ತಿ ಮುಟ್ಟುಗೋಲು :ತನ್ನ ವ್ಯಾಪ್ತಿ ಪ್ರದೇಶದಲ್ಲಿ ನಡೆದಂತಹ ಪ್ರಕರಣದ ಸುದ್ದಿ ಪಡೆದ ಶಾಸಕ ಡಾ. ಭರತ್ ಶೆಟ್ಟಿಯವರು ಕಾನೂನು ಪ್ರಕಾರವೇ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕುವಂತೆ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕೆಲ ದಿನಗಳ ಹಿಂದೆ ಅಡ್ಯಾರ್ನಲ್ಲಿ ನಡೆದಂತಹ ಗೋಹತ್ಯೆ ಹಿನ್ನೆಲೆಯಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಬಕ್ರೀದ್ ಅಥವಾ ಇತರ ಸಂದರ್ಭಗಳಲ್ಲಿ ಅಕ್ರಮ ಗೋಹತ್ಯೆ ನಡೆಸುವವರ ಆಸ್ತಿ ಮುಟ್ಟುಗೋಲು ಹಾಕಿ, ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಗಂಜಿಮಠದ ಅಕ್ರಮ ಕಸಾಯಿಖಾನೆ(ಮನೆ) ಮಾಲಕ ಯೂಸೂಫ್ ಆಸ್ತಿ ಮುಟ್ಟುಗೋಲು ಕ್ರಮ ಸಾಧ್ಯತೆ ಹೆಚ್ಚಿದೆ.
