ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರಕ್ಕೆ ಬಿಜೆಪಿ ಬಿಗ್ ಶಾಕ್ ನೀಡಿದೆ. ರಾಜ್ಯಸಭಾ ಚುನಾವಣೆಯ ಮತ ಎಣಿಕೆಯ ವೇಳೆ ಭಾರೀ ಹೈಡ್ರಾಮಾ ನಡೆದು ಇಂದು ಬೆಳಗ್ಗೆ ಫಲಿತಾಂಶ ಪ್ರಕಟವಾಗಿದೆ. ಅಗತ್ಯ ಮತಗಳು ಇಲ್ಲದೇ ಇದ್ದರೂ ಬಿಜೆಪಿ ತನ್ನ ಮೂರನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡಿದೆ. ಬಿಜೆಪಿ ಮೂರು ಸ್ಥಾನ ಗೆದ್ದರೆ, ಮೈತ್ರಿ ಸರ್ಕಾರದ ಮೂರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಕೇಂದ್ರ ಸಚಿವ ಪಿಯೂಷ್ ಗೋಯಲ್, ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್, ಶಿವಸೇನೆಯ ಸಂಜಯ್ ರಾವತ್, ಕಾಂಗ್ರೆಸ್ ನಾಯಕ ಇಮ್ರಾನ್ ಪ್ರತಾಪ್‌ಗರ್ಹಿ, ಬಿಜೆಪಿಯ ಅನಿಲ್ ಬೋಂಡೆ ಮತ್ತು ಧನಂಜಯ್ ಮಹಾದಿಕ್ ಆಯ್ಕೆ ಆಗಿದ್ದಾರೆ.

ಮೈತ್ರಿಯ ಮೂರು ಮತ್ತು ಬಿಜೆಪಿ ಇಬ್ಬರು ಅಭ್ಯರ್ಥಿಗಳ ಜಯ ಸುಲಭವಾಗಿತ್ತು. ಆದರೆ ಮೈತ್ರಿ ಸರ್ಕಾರ 4ನೇ ಅಭ್ಯರ್ಥಿಯನ್ನು ಇಳಿಸಿದ್ದರೆ ಬಿಜೆಪಿ ಮೂರನೇ ಅಭ್ಯರ್ಥಿಯನ್ನು ಇಳಿಸಿತ್ತು. ಇದರಿಂದಾಗಿ ಚುನಾವಣೆ ರೋಚಕ ಘಟ್ಟಕ್ಕೆ ತಿರುಗಿತ್ತು. ಮತ ಎಣಿಕೆಯ ವೇಳೆ ರಾತ್ರಿ ಭಾರೀ ಹೈಡ್ರಾಮವೇ ನಡೆದು ಬೆಳಗ್ಗೆ ಫಲಿತಾಂಶ ಪ್ರಕಟವಾಗಿದೆ.
