ಮುಂಬಯಿ: ಕಡಂದಲೆ ಸುರೇಶ್ ಭಂಡಾರಿ ಅಭಿನಂದನಾ ಸಮಿತಿ ಇದೇ ಜೂನ್.೧೨ರ ಭಾನುವಾರ ಕುರ್ಲಾ ಪೂರ್ವದಲ್ಲಿನ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿ ಹಮ್ಮಿಕೊಂಡಿರುವ ಕಡಂದಲೆ ಸುರೇಶ್ ಎಸ್.ಭಂಡಾರಿ ಜನ್ಮದ ಷಷ್ಠ್ಯಬ್ದಿಪೂರ್ತಿ ಸಂಭ್ರಮ ಮತ್ತು ಗ್ರಂಥ ಗೌರವ ಬಿಡುಗಡೆ ಭವ್ಯ ಸಮಾರಂಭದ ಪೂರ್ವಭಾವಿ ಸಭೆ ಇಂದಿಲ್ಲಿ ಸೋಮವಾರ ಸಂಜೆ ಘಾಟ್ಕೋಪರ್‌ನ ಮನಿಫೋಲ್ಡ್ ಕಚೇರಿಯಲ್ಲಿ ಅಭಿನಂದನಾ ಸಮಿತಿಯ ಉಪಾಧ್ಯಕ್ಷ ಡಾ| ಶಿವರಾಮ ಕೆ.ಭಂಡಾರಿ ಅಧ್ಯಕ್ಷತೆಯಲ್ಲಿ ಜರುಗಿತು.
ಕರ್ನಾಟಕ ಮತ್ತು ಮಹಾರಾಷ್ಟçದಲ್ಲಿನ ವಿಶೇಷವಾಗಿ ತುಳು ಕನ್ನಡಿಗರ ಸಾಮರಸ್ಯದ ಕೊಂಡಿಯಾಗಿ ಆಪದ್ಬಂಧು ಎಂದೇ ಜನಾನುರೆಣಿಸಿದ ಸುರೇಶ್ ಭಂಡಾರಿ ಅವರ ಸಾರ್ವತ್ರಿಕ ಸಮ್ಮಾನ ಸಂಭ್ರಮ ಹೆಗ್ಗುರುತು ಆಗಿ ಮೆರೆಯುವಂತಾಗಲಿ ಎಂದು ಡಾ| ಶಿವರಾಮ.ಭಂಡಾರಿ ಆಶಯ ವ್ಯಕ್ತಪಡಿಸಿದರು.
ಅಭಿನಂದನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್ ದಿನಪೂರ್ತಿಯಾಗಿಸಿ ಆಯೋಜಿಸಲಾಗಿರುವ ಭವ್ಯ ಕಾರ್ಯಕ್ರಮದ ರೂಪುರೇಷೆಗಳನ್ನು ತಿಳಿಸಿ ಸಕಲ ಸದ್ಗುಣ ಸಿರಿವಂತರಾಗಿರುವ ಎಲ್ಲರ ಅಕ್ಕರೆಯ ಸುರೇಶಣ್ಣನ ಈ ಕಾರ್ಯಕ್ರಮ ಐತಿಹಾಸಿಕ ಕಾರ್ಯಕ್ರಮವಾಗಿ ಮೂಡಿಬರುವಂತಾಗಬೇಕು. ಗುರ್ಮೆ ಫೌಂಡೇಶನ್ ಕಾಪು (ಉಡುಪಿ) ಇದರ ಅಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ (ಬಳ್ಳಾರಿ) ಸರ್ವಧ್ಯಕ್ಷತೆಯಲ್ಲಿ ಜರುಗುವ ಸಮಾರಂಭದಲ್ಲಿ ಮಂಗಳೂರು ಎ.ಜೆ ಶೆಟ್ಟಿ ಆಸ್ಪತ್ರೆಯ ಕಾರ್ಯಾಧ್ಯಕ್ಷ, ಆಡಳಿತ ನಿರ್ದೇಶಕ ಎ.ಜೆ ಶೆಟ್ಟಿ ಮುಖ್ಯ ಅತಿಥಿಯಾಗಿ ಮತ್ತು ಸ್ಥಾನೀಯ ಮಹಾನೀಯರು ಗೌರವ ಅತಿಥಿüಗಳಾಗಿ ಆಗಮಿಸಲಿದ್ದಾರೆ ಎಂದು ಯಶಸ್ಸಿಗಾಗಿ ಸಾಕಷ್ಟು ಪೂರ್ವಸಿದ್ಧತೆ ನಡೆಸಲಾಗಿರುವ ಬಗ್ಗೆ ಮಾಹಿತಿಯನ್ನಿತ್ತರು.
ಅಭಿನಂದನಾ ಗಂಥದ ಪ್ರಧಾನ ಸಂಪಾದಕ ಸಾ.ದಯಾ (ದಯಾನಂದ ಸಾಲಿಯಾನ್) ಮಾತನಾಡಿ ಊರ ಪರವೂರ ಗಣ್ಯಾತಿಗಣ್ಯರು, ಸ್ವಾಮೀಜಿಗಳು ಸೇರಿದಂತೆ ಸುರೇಶ್ ಭಂಡಾರಿ ಅವರ ಆಪ್ತರು ಇದೀಗಲೇ ತಮ್ಮ ಶುಭ ಸಂದೇಶಗಳನ್ನು ರವಾನಿಸಿದ್ದು ಅಭಿನಂದನಾ ಗಂಥವು ಅತ್ಯಾಕರ್ಷಕ ಮತ್ತು ಮೌಲಿಕವಾಗಿ ಮೂಡಿಬರಲಿದೆ. ಕರ್ನಾಟಕ ಧಾರ್ಮಿಕ ಪರಿಷತ್‌ನ ಮಾಜಿ ಸದಸ್ಯ ವಿದ್ವಾನ್ ಪಂಜ ಭಾಸ್ಕರ ಭಟ್ ಅಭಿನಂದನಾ ನುಡಿಗಳನ್ನಾಡಲಿದ್ದಾರೆ ಎಂದರು.
ಗೌರವ ಸಲಹೆಗಾರ ಅಶೋಕ ಪಕ್ಕಳ ಸಭಾಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಜವಾಬ್ದಾರಿ ಬಗ್ಗೆ ತಿಳಿಸಿ ಎಲ್ಲರನ್ನೂ ಸಂತೋಷವನ್ನಾಗಿರಿಸುವಲ್ಲಿ ಪ್ರಯತ್ನಿಸುವ ಸುರೇಶ್ ಭಂಡಾರಿ ಅವರ ಕಾರ್ಯಕ್ರಮವೂ ಸುಂದರ ಮತ್ತು ಸ್ಮರಣೀಯವಾಗಿಸಬೇಕು. ಜೀವಮಾನವಿಡೀ ಈ ಕ್ಷಣಗಳು ಜೀವಂತವಾಗಿರಿಸುವ ಕಾರ್ಯಕ್ರಮ ಆಗಬೇಕು. ಅವರ ಸ್ನೇಹತ್ವದ, ಭರವಸೆಯ ಭಾವನೆಗಳಂತೆ ಈ ಕಾರ್ಯಕ್ರಮವೂ ಒಂದಾಗಿಸೋಣ ಎಂದರು.
ಸಭೆಯಲ್ಲಿ ಸಮಾರಂಭದ ಪ್ರಧಾನ ರೂವಾರಿ ಕಡಂದಲೆ ಸುರೇಶ್ ಎಸ್.ಭಂಡಾರಿ, ಅಭಿನಂದನಾ ಸಮಿತಿಯ ಜೊತೆ ಕಾರ್ಯದರ್ಶಿ ಕರ್ನೂರು ಮೋಹನ್ ರೈ, ಗೌರವ ಸಲಹೆಗಾರರಾದ ನ್ಯಾಯವಾದಿ ಆರ್.ಎಂ ಭಂಡಾರಿ, ಸತೀಶ್ ಶೆಟ್ಟಿ ಅಸಲ್ಫ, ಸದಸ್ಯರಾದ ಪ್ರಕಾಶ್ ಎಂ.ಶೆಟ್ಟಿ ಸುರತ್ಕಲ್, ಹೇಮಾ ಎಸ್. ಅಮೀನ್, ಜಯಶೀಲ ಭಂಡಾರಿ, ಅಭಿನಂದನಾ ಗಂಥದ ಸದಸ್ಯರಾದ ಅಶೋಕ ಎಸ್.ಸುವರ್ಣ, ಲತೀಶ್ ಕೆ.ಶೆಟ್ಟಿ, ಸುನೀಲ್ ಅಮೀನ್, ಸುರೇಶ್ ಎ.ಶೆಟ್ಟಿ ಕಣಂಜಾರು ಮತ್ತಿತರರು ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನಿತ್ತು ಸಮಾರಂಭದ ಯಶಸ್ಸಿಗೆ ಶುಭ ಹಾರೈಸಿದರು. ವಿಶ್ವನಾಥ ದೊಡ್ಮನೆ ಪ್ರಾರ್ಥನೆಗೈದರು. ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಸಭಾಕಲಾಪ ನಿರೂಪಿಸಿ ವಂದಿಸಿದರು.
