ಮುಂಬಯಿ: ಹೊಟ್ಟೆ ಹಸಿದಾಗ ಜನ ಹೊಟ್ಟೆ ಪಾಡಿಗಾಗಿ ಹುಡುಕಿ ಮುಂಬಯಿಗೆ ಬಂದರು. ಅದೇ ರೀತಿ ಉಡುಪಿಯಲ್ಲಿ ಕುತಿರುವ ಕೃಷ್ಣ. ಮುಂಬಯಿಯಲ್ಲಿರುವ ದಕ್ಷಿಣ ಕನ್ನಡ ಜನರಿಗೆ ಊರಿಗೆ ಹೋಗಿ ಕೃಷ್ಣನನ್ನು ಭೇಟಿ ಆಗಲು ಅನಾನುಕೂಲವಾದರಿಂದ ಕೃಷ್ಣನನ್ನೇ ಮುಂಬಯಿ ತಂದು ಬಂದರು. ಜನರು ದಾರಿತಪ್ಪಿ ಹೋಗಬಾರದೆಂಬ ಕಾರಣ ನಮ ಪೂರ್ವಜರು ಕೃಷ್ಣನನ್ನು ತಂದು ಇಲ್ಲಿನ ಗೋಕುಲದಲ್ಲಿ ಪ್ರತಿಷ್ಠಾಪಿಸಿದರು. ಬಿಎಸ್‌ಕೆಬಿಎ ರೂಪಿಸಿದ ಗೋಕುಲ ಕಂಸನ ಮನೆಯ ಪಕ್ಕದಲ್ಲಿದ್ದಂತಹ ನಂದಗೋಕುಲಕ್ಕಿಂತ ಕಮ್ಮಿಯಿಲ್ಲ. ಇದನ್ನೆಲ್ಲಾ ನೋಡಿಕೊಂಡು ನಮ್ಮ ದೈಹಿಕ ಮಾನಸಿಕ ಎರಡೂ ರೀತಿಯ ಕಾಯಿಲೆಗಳಿಂದ ಮುಕ್ತರಾಗೋಣ ಎಂದು ಉಡುಪಿ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮಿಜಿ ಸಂತಸ ವ್ಯಕ್ತ ಪಡಿಸಿದರು.

ಬಾಂಬೇ ಸೌತ್ ಕೆನರಾ ಬ್ರಾಹ್ಮೀಣ್’ಸ್ ಅಸೋಸಿಯೇಶನ್ (ಬಿಎಸ್‌ಕೆಬಿಎ) ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಸಂಸ್ಥೆಗಳ ಸಯಾನ್ ಪೂರ್ವದ ನಿವೇಶನ ೨೭೩ರಲ್ಲಿ ಅತ್ಯಾಧುನಿಕ ನವಕಾಲೀನ ಸೌಲಭ್ಯಗಳೊಂದಿಗೆ ಹೊಚ್ಚೊಸತಾಗಿ ಪುನರಾಭಿವೃದ್ಧಿಯೊಂದಿಗೆ ನಿರ್ಮಾಣಗೊಂಡ ಗೋಕುಲ ಕಟ್ಟಡಕ್ಕೆ ಚರಣಸ್ಪರ್ಶಗೈದು ಅನುಗ್ರಹಿಸಿ ಅದಮಾರುಶ್ರೀ ನೆರೆದ ಸದ್ಭಕ್ತರನ್ನು ಹರಸಿದರು.

೧೯೨೫ರಲ್ಲಿ ಬಾಂಬೆ ಸೌತ್ ಕೆನರಾ ಬ್ರಾಹ್ಮಿನ್ಸ್ ಅಸೋಸಿಯೇಶನ್ (ಬಿಎಸ್‌ಕೆಬಿಎ) ನಾಮಂಕಿತವಾಗಿ ಸ್ಥಾಪಿಸಿದ ಸ್ಥಾಪಕಕರ್ತರು, ಸಂಸ್ಥೆಯ ಪರಿಣಮಿಸಿದ ಮತ್ತು ಸದ್ಯ ಶತಮಾನದ ಸೇವೆಯತ್ತ ಮುನ್ನಡೆಸುತ್ತಿರುವ ಎಲ್ಲರನ್ನೂ ಸ್ಮರಿಸಿದ ವಿಶ್ವಪ್ರಿಯರು, ಸಂಬಂಧಗಳು ಮತ್ತು ಸತ್ಯ ಎರಡು ನಮ್ಮ ಮುಂದೆ ನಿಂತಾಗ ಸಂಬಂಧಿ ಎಂದು ನೋಡಬಾರದು.

ಸತ್ಯದ ಕಡೆಗೆ ಗಮನ ಕೊಡಬೇಕು. ಕೃಷ್ಣ ನಮಗೆ ಭಗವದ್ಗೀತೆಯನ್ನು ಕೊಟ್ಟಿದ್ದಾರೆ. ಅದಕ್ಕಾಗಿ ಇಂತಹ ಪಾವಿತ್ರ್ಯತಾ ಭಗವದ್ಗೀತೆಯನ್ನು ನಮ್ಮ ಮನೆಯಲ್ಲಿ ಹಿರಿಯರು ಪ್ರತಿದಿನ ಓದುವ ಕೆಲಸ ಮಾಡಿದರೆ ನಮ್ಮ ಮಕ್ಕಳು ಅದನ್ನು ಅನುಸರಿಸುತ್ತಾರೆ ಹಾಗೂ ಮಾತಾಪಿತರಿಗೆ ಕೊಟ್ಟ ಭಾಷೆಯನ್ನು ಉಳಿಸುತ್ತಾರೆ. ಇಲ್ಲವದಲ್ಲಿ ಮಕ್ಕಳು ಮತಾಪಿತರನ್ನು ಆಶ್ರಮದಲ್ಲಿ ಬಿಡುತ್ತಾರೆ. ಆದುದರಿಂದ ನಾವೂ ನಮ್ಮ ಮಕ್ಕಳಿಗೆ ಭಗವದ್ಗೀತೆ ಏನು ಎಂದು ಕಲಿಸಿಕೊಡಬೇಕು. ಆಗ ಮಾತ್ರ ನಮ್ಮ ಭಾರತೀಯ ಸಂಸ್ಕೃತಿ ಇಡೀ ಜಗತ್ತಿನಲ್ಲಿ ಏನು ಎಂಬುವುದು ತಿಳಿಯುತ್ತದೆ. ಗೋಕುಲದ ಪುನರ್‌ನಿರ್ಮಾಣ ಇಷ್ಟೊಂದು ಸೊಗಸಾಗಿದೆ ಯಾಕೆಂದರೆ ಇದರ ಸಾರಥ್ಯ ಡಾ| ಸುರೇಶ್ ರಾವ್ ವಹಿಸಿದ್ದು, ಯಾಕೆಂದರೆ ಅವರು ವೃತ್ತಿಯಲ್ಲಿ ಡಾಕ್ಟರ್, ಯಾರಿಗೆ ಯಾವ ಕಾಯಿಲೆ ಎಂದು ವೈದ್ಯರಿಗೆ ಗೊತ್ತು ಎಂದೂ ವಿಶ್ವಪ್ರಿಯರು ವೈಶಿಷ್ಟ್ಯಮಯವಾಗಿ ಬಣ್ಣಿಸಿದರು.

ಬಿಎಸ್‌ಕೆಬಿಎ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಸಂಸ್ಥೆಗಳ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಸ್ವಾಗತಿಸಿ ಸುಮಾರು ಒಂಬತ್ತುವರೆ ದಶಕಗಳ ಹಿಂದೆ ಮುಂಬಯಿವಾಸಿ ಅವಿಭಜಿತ ದಕ್ಷಿಣ ಕನ್ನಡ ಮೂಲತಃ ಬ್ರಾಹ್ಮಣರು ಸಂಘಟಿತರಾಗಿ ಸ್ಥಾಪಿತ ಬಿಎಸ್‌ಕೆಬಿಎ ಸಂಸ್ಥೆಯ ಬೃಹತ್ ಕನಸು ಇದೀಗ ನನಸಾಗಿದೆ. ಗೋಕುಲದ ಪುನರ್ ನಿರ್ಮಾಣ, ಶ್ರೀಕೃಷ್ಣ ಮಂದಿರ ಭಾವೀ ಜನಾಂಗಕ್ಕೆ ಕಾಮಧೇನು ಆಗಲಿದೆ ಎಂದರು.

ಗೋಕುಲದ ಹಿರಿಯ ಪುರೋಹಿತ ವೇದಮೂರ್ತಿ ಶ್ರೀ ಗುರುರಾಜ ಉಡುಪ ತಮ್ಮ ಪೌರೋಹಿತ್ಯದಲ್ಲಿ ಬೆಳಿಗ್ಗೆ ಗಣಯಾಗ, ದ್ವಾರ ಪೂಜೆ, ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಪೂಜೆ ನೆರವೇರಿಸಿ ಆಶೀರ್ವದಿಸಿದರು. ವಿದ್ವಾನ್ ಧರೆಗುಡ್ಡೆ ಶ್ರೀನಿವಾಸ ಭಟ್ ಆಶೀರ್ವಚನ ನೀಡಿದರು. ಕೃಷ್ಣರಾಜ ಉಪಾಧ್ಯಾಯ, ಶ್ರೀನಿವಾಸ ಭಟ್, ಗೋಪಾಲ ಭಟ್, ಗಿರಿಧರ ಉಡುಪ, ನಾಗರಾಜ ಐತಾಳ, ಎಸ್.ಎನ್ ಉಡುಪ ಜೆರಿಮೆರಿ, ನಾಗರಾಜ ಉಡುಪ, ದಿನೇಶ್ ಉಪರ್ಣಾ, ಗುರುರಾಜ ಉಡುಪ ಸಹ ಪುರೋಹಿತರಾಗಿದ್ದು ಇತರ ಪೂಜಾಧಿಗಳನ್ನು ನೆರವೇರಿಸಿ ತೀರ್ಥ ಪ್ರಸಾದವನ್ನಿತ್ತು ಹರಸಿದರು. ಬಿಎಸ್‌ಕೆಬಿಎ ಉಪಾಧ್ಯಕ್ಷೆ ಶೈಲಿನಿ ಎ.ರಾವ್ ಮತ್ತು ಅರುಣಾ ರಾವ್ ದಂಪತಿ ಶ್ರೀ ಸತ್ಯನಾರಾಯಣ ಪೂಜೆಯ ಹಾಗೂ ಕಾರ್ಯದರ್ಶಿ ಅನಂತ ಪದ್ಮನಾಭನ್ ಕೆ.ಪೋತಿ ಮತ್ತು ಡಾ| ಸಹನಾ ಎ.ಪೋತಿ ದಂಪತಿ ಗಣಹೋಮದ ಯಜಮಾನ ವಹಿಸಿದ್ದರು. ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಮತ್ತು ವಿಜಯಲಕ್ಷ್ಮೀ ಸುರೇಶ್ ರಾವ್ ದಂಪತಿ ಶ್ರೀಪಾದರ ಪಾದಪೂಜೆ ನೆರವೇರಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ನೂತನ ಸಭಾಗೃಹದಲ್ಲಿ ವಿದುಷಿ ವೀಣಾ ಶಾಸ್ತ್ರಿ ಮತ್ತು ಶಿಷ್ಯೆಯರಿಂದ ಭಕ್ತಿಗಾನಸುಧೆ, ಗೋಕುಲದ ಕಿರಿಯ-ಹಿರಿಯ ಯಕ್ಷಗಾನ ಕಲಾವಿದರು ತೆಂಕು ಹಾಗೂ ಬಡಗು ತಿಟ್ಟುಗಳ ಯಕ್ಷ ಸಂಗೀತ, ನೃತ್ಯ ಸಂವಾದ ರಸಭರಿತ ಯಕ್ಷ ಭೋಜನ ಎಂಬ ವಿನೂತನ ಕಾರ್ಯಕ್ರಮ ಪ್ರಸ್ತುತ ಪಡಿಸಿದರು. ತೆಂಕುತಿಟ್ಟು ಭಾಗವತರಾಗಿ ಜಯಪ್ರಕಾಶ್ ನೀಡುವಣ್ಣಾಯ, ಹರೀಶ್ ಸಾಲಿಯಾನ್ (ಮದ್ದಳೆ), ಪ್ರವೀಣ್ ಶೆಟ್ಟಿ (ಚೆಂಡೆ), ಬಡಗುತಿಟ್ಟು ಭಾಗವತರಾಗಿ ರಾಘವೇಂದ್ರ ಮಾಳ, ಎ.ಪಿ ಪಾಠಕ್ (ಮದ್ದಳೆ), ಪ್ರಸನ್ನ ಹೆಗ್ಗರ್ (ಚೆಂಡೆ) ಸಹ ಕಲಾವಿದರಾಗಿ ಸಹಕರಿಸಿದರು. ಸಿಎ| ಹರಿದಾಸ ಭಟ್ ಪ್ರಸ್ತಾವನೆಗೈದು ಕಾರ್ಯಕ್ರಮ ನಿರೂಪಿಸಿದರು. ವಾಮನ ಹೊಳ್ಳ ವಂದಿಸಿದರು.

ಈ ಸಂದರ್ಭದಲ್ಲಿ ಬಿಎಸ್‌ಕೆಬಿಎ ಕೆ.ಸುಬ್ಬಣ್ಣ ರಾವ್, ಪ್ರಸಕ್ತ ಉಪಾಧ್ಯಕ್ಷ ವಾಮನ ಹೊಳ್ಳ, ಕೋಶಾಧಿಕಾರಿ ಸಿಎ| ಹರಿದಾಸ ಭಟ್, ಜೊತೆ ಕಾರ್ಯದರ್ಶಿಗಳಾದ ಪಿ.ಸಿ.ಎನ್ ರಾವ್ ಮತ್ತು ಚಿತ್ರಾ ಮೇಲ್ಮನೆ, ಜೊತೆ ಕೋಶಾಧಿಕಾರಿ ಪಿ.ಬಿ.ಕುಸುಮಾ ಶ್ರೀನಿವಾಸ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಐ.ಕೆ ಪ್ರೇಮಾ ಎಸ್.ರಾವ್, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ನ ವಿಶ್ವಸ್ಥರಾದ ಎ.ಶ್ರೀನಿವಾಸ ರಾವ್, ಬಿ.ರಮಾನಂದ ರಾವ್, ಕೃಷ್ಣ ಆಚಾರ್ಯ ಸೇರಿದಂತೆ ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಅಧ್ಯಕ್ಷ ಕೆ.ಎಲ್ ಬಂಗೇರ, ದೇವಾಡಿಗರ ಸಂಘ ಮುಂಬಯಿ ಗೌ| ಪ್ರ| ಕಾರ್ಯದರ್ಶಿ ವಿಶ್ವನಾಥ ಬಿ.ದೇವಾಡಿಗ, ರಾಮ ವಿಠಲ ಕಲ್ಲೂರಾಯ, ಹರಿ ಭಟ್ ಮುಂಡ್ಕೂರು, ಸುಧೀರ್ ಆರ್.ಎಲ್ ಭಟ್, ಡಾ| ಎ.ಎಸ್ ರಾವ್, ಅದಮಾರು ಮಠದ ಲಕ್ಷ್ಮೀನಾರಾಯಣ ಮುಚ್ಚಿಂತ್ತಾಯ, ಪಡುಬಿದ್ರಿ ವಿ.ರಾಜೇಶ್ ರಾವ್, ಡಾ| ಎಂ.ನರೇಂದ್ರ, ಡಾ| ಜಿ.ವಿ ಕುಲ್ಕರ್ಣಿ, ದಾನಿಗಳು, ಶ್ರೀಕೃಷ್ಣನ ಭಕ್ತರನೇಕರು ಹಾಜರಿದ್ದರು.

ಕಾರ್ಯಕ್ರಮದ ವೈಶಿಷ್ಟ್ಯತೆ:
ಮಂದಿರ ಪುನರಾಭಿವೃದ್ಧಿಯ ಸರದಾರರಾಗಿದ್ದು ನೇತೃತ್ವ ವಹಿಸಿಕೊಂಡ ಡಾ| ಸುರೇಶ್ ಎಸ್.ರಾವ್ ದಂಪತಿಗೆ ನೆರೆದ ಸದ್ಭಕ್ತರು ಗಣ್ಯತರಾಗಿ (ನಿಂತು) ಹರ್ಷೋದ್ಗಾರದಿಂದ ಕರತಾಡಗಳಿಂದ ಜಯಘೋಷ ಹಾಕಿ ಅಭಿನಂದಿಸಿದರು. ಶತಾಯುಷಿ ೧೦೩ರ ಹರೆಯದ ಮುತ್ತಜ್ಜಿ ಸತ್ಯಭಾಮ ಲಕ್ಷ್ಮೀನಾರಾಯಣ ಭಟ್ ಪರೇಲ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ನೆರೆದವರಲ್ಲಿ ಆಶ್ಚರ್ಯ ಮೂಡಿಸಿದ್ದು ಶ್ರೀಪಾದರು ಅಚ್ಚರಿಪಟ್ಟು ವಿಶೇಷವಾಗಿ ಪ್ರಸಾದವನ್ನಿತ್ತು ಗೌರವಿಸಿದರು.

