ಕೈಕಂಬ : ಗುರುಪುರ ಗೋಳಿದಡಿಗುತ್ತಿನ ವಾರ್ಷಿಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ‘ಗುತ್ತುದ ವರ್ಸೊದ ಪರ್ಬೊ’ ಜ. ೧೮ ಮತ್ತು ಜ.೧೯ರಂದು ಚಿಕ್ಕಮಗಳೂರು ವೇದವಿಜ್ಞಾನ ಮಂದಿರದ ಬ್ರಹ್ಮಶ್ರೀ ಶಿರೋಮಣಿ ಕೆ ಎಸ್ ನಿತ್ಯಾನಂದ ಅವರ ಆಶೀರ್ವಚನ ಹಾಗೂ ಗಡಿಕಾರ ಶ್ರೀ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿಯವರ ಮುಂದಾಳತ್ವದಲ್ಲಿ ನಡೆಯಲಿದೆ.gur-jan-6-logo

ಜ. ೧೮ರಂದು ಪ್ರಾತಃಕಾಲದಲ್ಲಿ ಶ್ರೀ ವೈದ್ಯನಾಥಾದ್ಯ ಪಂಚ ದೇವತೆಗಳಿಗೆ ಪೂಜೆ, ಬೆಳಿಗ್ಗೆ ೮:೩೦ರಿಂದ ಗಣಪತಿ ಹೋಮ, ಬೆಳಿಗ್ಗೆ ೧೦:೩೦ರಿಂದ ಪಾಶುಪತ ಹೋಮ, ಬೆಳಿಗ್ಗೆ ೧೧:೩೦ಕ್ಕೆ ಪೂರ್ಣಾಹುತಿ ಜರುಗಲಿದೆ. ೧೧:೩೦ರಿಂದ ೧:೩೦ರವರೆಗೆ ಗೋಳಿದಡಿಗುತ್ತಿನ ಚಾವಡಿಯ ಮಿತ್ರರಿಂದ ಭಜನಾ ಸಂಕೀರ್ತನೆ ನಡೆಯಲಿದೆ.

ಸಂಜೆ ೬ಕ್ಕೆ ಶ್ರೀ ವೈದ್ಯನಾಥೇಶ್ವರ ವೇದಿಕೆಯಲ್ಲಿ ‘ಗುತ್ತಿನ ವರ್ಷದ ಒಡ್ಡೋಲಗ’. ಕೆ ಎಸ್ ನಿತ್ಯಾನಂದರ ಗುರು ಸಾನಿಧ್ಯದಲ್ಲಿ ನಡೆಯಲಿರುವ ಒಡ್ಡೋಲಗದಲ್ಲಿ ಮೂಡಬಿದ್ರೆ ಚೌಟರ ಅರಮನೆಯ ಕುಲದೀಪ ಅಧ್ಯಕ್ಷತೆ ವಹಿಸಲಿದ್ದಾರೆ. ಜಗದೀಶ ಶೆಟ್ಟಿ ಯಾನೆ ಇಂದ್ರಾಳ ಕೊಗರ ಶೆಟ್ಟಿ(ಗಡಿಕಾರರು, ದೊಡ್ಡಗುತ್ತು, ಇರುವೈಲು), ಬಗ್ಗ ಪೂಜಾರಿ ಯಾನೆ ಉಮೇಶ್ ಕೋಟ್ಯಾನ್(ಗಡಿಕಾರರು, ಕೇಂಜ ಬಗ್ಗ ತೋಟ) ದೀಪ ಪ್ರಜ್ವಲನ ಮಾಡಿದರೆ, ದೀಪಾ ಎನ್ ಶೆಟ್ಟಿ(ಪೆರ್ಮಾರಗುತ್ತು, ಮೂಲ್ಕಿ) ದಿಕ್ಸೂಚಿ ಮಾತುಗಳನ್ನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎರ್ಮಾಳು ರವಿ ಭಟ್(ಉದ್ಯಮಿ), ನವೀನ್‌ಚಂದ್ರ ಆಳ್ವ(ತಿರುವೈಲುಗುತ್ತು), ಭಾಗ್ಯರಾಜ ಆಳ್ವ(ಕಾರಮೊಗರುಗುತ್ತು) ಮತ್ತು ರಾಜೇಂದ್ರ ಸಿಂಗ್ ಬಾಬು(ಚಲನಚಿತ್ರ ನಿರ್ದೇಶಕ) ಪಾಲ್ಗೊಳ್ಳುವರು. ಸಂಜೆ ೭:೩೦ರಿಂದ ಸನಾತನ ನಾಟ್ಯಾಲಯ ಮಂಗಳೂರು ಇವರಿಂದ ‘ಪುಣ್ಯಭೂಮಿ ಭಾರತ’ ನುಡಿನಾದ ನಾಟ್ಯಾಮೃತ ಜರುಗಲಿದೆ.

ಜ. ೧೯ರಂದು ಬೆಳಿಗ್ಗೆ ಶ್ರೀ ರುದ್ರಹೋಮ, ೧೦:೩೦ರಿಂದ ಶ್ರೀ ಚಂಡಿಕಾಹೋಮ, ೧೧:೩೦ಕ್ಕೆ ಪೂರ್ಣಾಹುತಿ, ಬಳಿಕ ಭಜನಾ ಸಂಕೀರ್ತನೆ ನಡೆಯಲಿದೆ. ಸಂಜೆ ೬:೩೦ರಿಂದ ೧೧:೩೦ರವರೆಗೆ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ನಾಗವೃಜ ಕ್ಷೇತ್ರ ಪಾವಂಜೆ ಹಳೆಯಂಗಡಿ ಇವರಿಂದ `ರಾಜಾ ಕಾಕತೀಯ’ ಕಾಲಮಿತಿ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ. ಸಂಜೆ ೪:೩೦ಕ್ಕೆ ಗುತ್ತಿನ ಚಾವಡಿಯಲ್ಲಿ ಶ್ರೀ ದೇವರ ಪೂಜೆಯ ಬಳಿಕ ಸಂಜೆ ೬:೧೫ಕ್ಕೆ ಚೌಕಿಪೂಜೆ ನಡೆಯಲಿದೆ. ಎರಡೂ ದಿನವೂ ನಿರಂತರ ಊಟೋಪಚಾರ ಇರುವುದು.

ಗುತ್ತಿನ ಚಾವಡಿಯಲ್ಲಿ ವಾರ್ಷಿಕ ಕಟ್ಟುಕಟ್ಟಳೆಯಂತೆ ದೈವೀ ಸಂಬಂಧಿಯಾದ ಈ ಕಾರ್ಯಕ್ರಮ ನಡೆಸಿಕೊಂಡು ಹೋಗುವುದು ಅನಿವಾರ್ಯವಾಗಿರುತ್ತದೆ. ಗೋಳಿದಡಿಗುತ್ತಿನಲ್ಲಿ ನಡೆಯುವ ‘ಗುತ್ತುದ ವರ್ಸೊದ ಪರ್ಬೊ’ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಸರ್ಕಾರದ ಕೋವಿಡ್-೧೯ ಮಾರ್ಗಸೂಚಿಯನ್ವಯ ನಿರ್ಬಂಧಿತ ನಿಯಮಗಳ ಪಾಲನೆಯೊಂದಿಗೆ ನಡೆಯಲಿವೆ. ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತಮಿತ್ರರು ಆರೋಗ್ಯದ ದೃಷ್ಟಿಯಿಂದ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹೆಚ್ಚು ಉಪಯುಕ್ತ” ಎಂದು ಗುರುಪುರ ಗೋಳಿದಡಿಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.

By suddi9

Leave a Reply

Your email address will not be published. Required fields are marked *