ಮುಂಬಯಿ : ನಮ್ಮ ಸುತ್ತ ಮುತ್ತಲಿನ ಸಮಾಜ ಸುಸ್ಥಿರವಾಗಿರಬೇಕಾದರೆ ನಾವುಗಳು ಆರೋಗ್ಯಕರ ಜೀವನ ಶೈಲಿಯ ಬಗ್ಗೆ ಗಮನ ಹರಿಸುವುದು ನಮ್ಮ ಆದ್ಯ ಕರ್ತವ್ಯ. ಆರೋಗ್ಯದ ದೃಷ್ಟಿಯಿಂದ ಪುರುಷರು ಮೂರು ತಿಂಗಳು ಹಾಗೂ ಮಹಿಳೆಯರು ನಾಲ್ಕು ತಿಂಗಳ ಅಂತರದಲ್ಲಿ ರಕ್ತದಾನ ಮಾಡಬಹುದು. ಒಬ್ಬರ ಒಂದು ದಿನದ ರಕ್ತದಾನದಿಂದ ಮೂರು ಜನರ ಜೀವ ಉಳಿಸಲು ಸಾಧ್ಯ. ರಕ್ತದಾನದಿಂದ ಮನಸ್ಸಿಗೆ ಸಮಾಧಾನಕರ ಭಾವನೆ ಮೂಡುತ್ತೆ. ರಕ್ತದಾನ ಅನ್ನುವುದು ಒಂದು ರೀತಿಯಲ್ಲಿ ನೀವು ಮಾಡುವ ಬಹಳ ದೊಡ್ಡ ಮಟ್ಟದ ದೇಶ ಸೇವೆ ಹಾಗೂ ದೇವರು ಮೆಚ್ಚುವಂತಹ ಕೆಲಸ. ರಕ್ತದಾನಕ್ಕೆ ಯಾವುದೇ ಜಾತಿ ಮತ ಪಂಥದ ಪರಿಮಿತಿ ಆಗಲಿ ಯಾವುದೇ ಗಡಿ ರೇಖೆಯೂ ಅದಕ್ಕಿಲ್ಲ ಎಂದು ಬಂಟರ ಸಂಘ ಮುಂಬಯಿ ಇದರ ಬಂಟ್ಸ್ ಹೆಲ್ತ್ ಸೆಂಟರ್‌ನ ಕಾರ್ಯಧ್ಯಕ್ಷ ಡಾ| ಸತ್ಯಪ್ರಕಾಶ್ ಶೆಟ್ಟಿ ತಿಳಿಸಿದರು.
ಬೃಹನ್ಮುಂಬಯಿಯಲ್ಲಿನ ಹೆಸರಾಂತಕ ಸಂಸ್ಥೆ ಪೊವಾಯಿ ಕನ್ನಡ ಸೇವಾ ಸಂಘ ತನ್ನ ರಜತ ಮಹೋತ್ಸವದ ನಿಮಿತ್ತ ಸಂಘದ ಕಛೇರಿಯಲ್ಲಿ ಇತ್ತೀಚೆಗೆ ಹಮ್ಮಿಕೊಂಡ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಡಾ| ಸತ್ಯಪ್ರಕಾಶ್ ಶೆಟ್ಟಿ ಮಾತನಾಡಿ ನೆರೆದ ಜನತೆಗೆ ಕಿವಿಮಾತುಗಳನ್ನಾಡಿದರು.
ಸ್ಥಾನೀಯ ನಗರಸೇವಕ ಅಶೋಕ ಮಾಟೇಕರ್ ಅತಿಥಿü ಅಭ್ಯಾಗತರಾಗಿದ್ದು ಮಾತನಾಡಿ ಈ ಕನ್ನಡ ಸಂಘವು ಪೊವಾಯಿ ಪರಿಸರದಲ್ಲಿ ನಿರಂತರವಾಗಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿ ಕೊಂಡಿರುವುದನ್ನು ನಾನು ಗಮನಿಸುತ್ತಾ ಬಂದಿರುವೆ. ಇವತ್ತಿನ ಈ ಶಿಬಿರಕ್ಕೆ ನಮ್ಮ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಕ್ತದಾನಕ್ಕೆ ಸ್ಪಂದಿಸಿರುವರು. ಅಂತೆಯೇ ಸಂಘದ ರಜತ ಮಹೋತ್ಸವ ಸಮಾರೋಪವೂ ಯಶಸ್ವಿಯಾಗುವಲ್ಲಿ ನಾನು ಮತ್ತು ನಮ್ಮ ಶಾಸಕರು ಸರ್ವ ರೀತಿಯ ಸಹಕಾರ ನೀಡುತ್ತೇವೆ ಎಂದರು.
ಕನ್ನಡ ಸೇವಾ ಸಂಘದ ಗೌರವಾಧ್ಯಕ್ಷ ಮಹೇಶ ಎಸ್.ಶೆಟ್ಟಿ ಮಾತನಾಡಿ ಸಾಮಾಜಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುವ ಈ ಸಂಸ್ಥೆ ತನ್ನ ಬೆಳ್ಳಿಮಹೋತ್ಸವದ ಸಡಗರದಲ್ಲಿದ್ದು ಈ ವರ್ಷವನ್ನು ಸಾಮಾಜಿಕ, ಸಾಹಿತಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶವಿರಿಸಿದೆ. ಆ ನಿಮಿತ್ತ ಮೊದಲ ಕಾರ್ಯಕ್ರಮವಾಗಿ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದೇವೆ. ರಜತಮಹೋತ್ಸವದ ಮುಂದಿನ ಕಾರ್ಯಕ್ರಮಗಳಿಗೂ ಇದೇ ರೀತಿಯ ಸಹಕಾರವನ್ನು ಆಶಿಸುವೆ ಎಂದರು.
ಸAಘದ ಮಹಿಳಾ ವಿಭಾಗಧ್ಯಕ್ಷೆ ಶೋಭಾ ರಮೇಶ ರೈ ಮಾತನಾಡಿ ಈ ಸಂಘದ ಮಹಿಳಾ ವಿಭಾಗವು ಸಂಘದ ಪ್ರತಿಯೊಂದು ಕಾರ್ಯಕ್ರಮವೂ ಸುಸಾಂಗವಾಗಿ ನೆರವೇರುವಾಗ ಅದು ನಮ್ಮ ಮನೆಯ ಶುಭ ಕಾರ್ಯಕ್ರಮ ಎಂದು ಭಾವಿಸಿ ಕಾರ್ಯಕ್ರಮದ ಯಶಸ್ಸಿಗೆ ದುಡಿಯುತ್ತಿದೆ. ಅಂತೆಯೇ ಇಂದೂ ಕೂಡಾ ಮಹಿಳಾ ಸದಸ್ಯೆಯರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಿ ಈ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ್ದಾರೆ ಎಂದರು.
ಈ ಶಿಬಿರಕ್ಕೆ ಸಂಘದ ಸದಸ್ಯರು, ಪರಿಸರದ ತುಳು ಕನ್ನಡಿಗರು ಹಾಗೂ ಕನ್ನಡೇತರರು ಸೇವಾ ನಿರತರಾಗಿ ಸಹಾಯ ಮಾಡುತ್ತಾರೆ. ಇಷ್ಟೊಂದು ಸಂಖ್ಯೆಯ ಸಹಯೋಗ ನಾವು ಆಶಿಸಿರಲಿಲ್ಲ. ನಮ್ಮ ಸಂಸ್ಥೆಯ ಕಾಯಕವೂ ಯಾವತ್ತಿಗೂ ಸಮಾಜಮುಖಿ ಆಗಿರುತ್ತೆ. ನಮ್ಮ ಮುಂದಿನ ಸೇವೆ, ಕಾರ್ಯಕ್ರಮಗಳಲ್ಲೂ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ಸಂಘದ ಅಧ್ಯಕ್ಷ ನ್ಯಾಯವಾದಿ ಆರ್. ಜಿ ಶೆಟ್ಟಿ ಕರೆಯಿತ್ತರು.
ಸಂಘದ ಮಾಜಿ ಅಧ್ಯಕ್ಷರುಗಳಾದ ರಮೇಶ ರೈ ಕೈಯಾರ, ಸುಧಾಕರ್ ಪುಜಾರಿ, ಪ್ರಭಾಕರ್ ಶೆಟ್ಟಿ ನಾನಯ್ಯಗರಡಿ, ಅಶೋಕ್ ಶೆಟ್ಟಿ ಸಾಂತೂರು, ಪ್ರಸಕ್ತ ಉಪಾಧ್ಯಕ್ಷ ದಿವಾಕರ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಸಂದರ್ಭೋಚಿತವಾಗಿ ಮಾತನಾಡಿ ಕಾರ್ಯಕ್ರಮದ ಯಶಸ್ಸಿಗೆ ಶುಭ ಹಾರೈಸಿದರು.
ಪ್ರಶಾಂತಿ ದಿವಾಕರ ಶೆಟ್ಟಿ ಅವರ ಪ್ರಾರ್ಥನೆಯೊಂದಿಗೆ ಶಿಬಿರ ಆದಿಗೊಂಡಿತು. ಕಾರ್ಯದರ್ಶಿ ನಾಗರಾಜ ಗುರುಪುರ ಸ್ವಾಗತಿಸಿದರು. ರಂಗನಟ ಭಾಸ್ಕರ ಸುವರ್ಣ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿದರು. ದಿನವಿಡೀ ನಡೆಸಲ್ಪಟ್ಟ ಶಿಬಿರದಲ್ಲಿ ಸುಮಾರು ೧೧೪ ಯೂನಿಟ್ ರಕ್ತ ಸಂಗ್ರಹವಾಗಿದ್ದು, ಕೋಶಾಧಿಕಾರಿ ಸಂದೇಶ್ ಶೆಟ್ಟಿ ಆಭಾರ ಮನ್ನಿಸಿದರು.
