ಕೈಕಂಬ: ಕಿಲೆಂಜಾರು ಗ್ರಾಮದ ಬಾರ್ದಿಲ ದೇವರಗುಡ್ಡೆ ಸಾಂಬಾ ಸದಾಶಿವ ದೇವಸ್ಥಾನದ ಸಂಪೂರ್ಣ ಜೀರ್ಣೋದ್ದಾರದ ಪ್ರಯುಕ್ತ ವಾಸ್ತು ಶಾಸ್ತ್ರ ರೀತ್ಯಾ ನೂತನವಾಗಿ ನಿರ್ಮಿಸಿದ ಆರೂಢಗಳಲ್ಲಿ ನಾಗದೇವರ ಪುನಃ ಪ್ರತಿಷ್ಠೆ ಹಾಗೂ ರಕ್ತೇಶ್ವರಿ ದೈವದ ಪುನಃ ಪ್ರತಿಷ್ಠೆ, ಬ್ರಹ್ಮ ಕಲಶಾಭಿಷೇಕ ಮತ್ತು ಆಶ್ಲೇಷ ಬಲಿ ಸೇವೆಗಳು ಡಿ.18 ರಂದು ಶನಿವಾರ ಮತ್ತು 19 ರಂದು ಭಾನುವಾರ ಕ್ಷೇತ್ರದ ತಂತ್ರಿಗಳಾದ ಬ್ರಹ್ಮ ಶ್ರೀ ದೇರೆಬೈಲು ಶಿವಪ್ರಸಾದ್ ತಂತ್ರಿಗಳ ನೇತೃತ್ವದಲ್ಲಿ, ದೇವಸ್ಥಾನ ದ ಅರ್ಚಕ ರಾಘವೇಂದ್ರ ಕಾರಂತ ಅವರ ಉಪಸ್ಥಿತಿಯಲ್ಲಿ ಜರಗಿದವು.
ಶನಿವಾರ ಸಾಯಂಕಾಲ ತೋರಣ ಮುಹೂರ್ತ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜೆ, ವಾಸ್ತು ಬಲಿ ಮತ್ತು ನಾಗದೇವರು ಮತ್ತು ರಕ್ತೇಶ್ವರಿ ದೈವದ ಬಿಂಬಾಧಿವಾಸ ನೆರವೇರಿತು.
ಮಂಗಳವಾರ ಬೆಳಿಗ್ಗೆ 8 ರಿಂದ ಪ್ರತಿಷ್ಟಾ ಹೋಮ, ಪ್ರಧಾನ ಹೋಮ, ನಾಗದೇವರಿಗೆ 25 ಕಲಶ ಪ್ರತಿಷ್ಠೆ, ರಕ್ತೇಶ್ವರಿ ದೈವಕ್ಕೆ ನವಕಲಶ ಪ್ರತಿಷ್ಠೆಯ ನಂತರ ಪೂರ್ವಾಹ್ನ 10.55 ರ ಕುಂಭ ಲಗ್ನದಲ್ಲಿ ನಾಗಶಿಲೆ ಸಹಿತ ನಾಗದೇವರ ಪುನಃ ಪ್ರತಿಷ್ಠೆ ಹಾಗೂ ರಕ್ತೇಶ್ವರಿ ದೈವದ ಪುನಃ ಪ್ರತಿಷ್ಟಾ ಕಲಶಾಭಿಷೇಕ, ಬ್ರಹ್ಮ ಕಲಶಾಭಿಷೇಕ ನೆರವೇರಿತು.
ಮಧ್ಯಾಹ್ನ ಆಶ್ಲೇಷ ಬಲಿ ಸೇವೆ ಮತ್ತು ಮಹಾಪೂಜೆ ಯ ನಂತರ ಅನ್ನಸಂತರ್ಪಣೆ ನಡೆಯಿತು. ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸೋಮಶೇಖರ್ ಶೆಟ್ಟಿ ಉಳಿಪಾಡಿಗುತ್ತು, ಸಮಿತಿಯ ಸದಸ್ಯರು, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಮೂಡಬಿದ್ರಿ,ಸಮಿತಿಯ ಪದಾಧಿಕಾರಿಗಳು, ಊರಿನ ಗಣ್ಯರು, ಭಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
