ಮುಂಬಯಿ: ಬೆಂಗಳೂರು ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆಯಿಂದ ಪುರಂದರದಾಸರು ಮತ್ತು ಜ್ಞಾನದೇವ ಒಂದು ತೌಲನಿಕ ಅಧ್ಯಯನಕ್ಕಾಗಿ ಕನ್ನಡದಲ್ಲಿ ಪಿಹೆಚ್.ಡಿ ಪದವಿ ಪಡೆದ ಡಾ| ಎಸ್.ಕೆ.ರಾಮಮೂರ್ತಿ ಅವರನ್ನು ಕಳೆದ ಮಂಗಳವಾರ ಮುಂಬಯಿ ವಿಶ್ವವಿದ್ಯಾಲಯದ ಸಾಂತಾಕ್ರೂಜ್ ಪೂರ್ವದ ಕಲೀನಾ ಕ್ಯಾಂಪಸ್‌ನ ವಿದ್ಯಾನಗರಿ ಇಲ್ಲಿನ ಕನ್ನಡ ವಿಭಾಗದ ಸಭಾಗೃಹದಲ್ಲಿ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದ ಪರವಾಗಿ ಗೌರವಿಸಲಾಯಿತು.
ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಪ್ರಸ್ತಾವನೆಗೈದು ಡಾ| ರಾಮಮೂರ್ತಿ ಅವರು ಉತ್ಕಟ ಸಾಹಿತ್ಯದ ಉಪಾಸಕರು. ಅವರದು ಬಹುಭಾಷಿಕ ಸಂವೇದನೆ. ಕನ್ನಡ-ಮರಾಠಿ ದಾಸ ಸಾಹಿತ್ಯವನ್ನು ತೂಗಿ ನೋಡುವ ಕಾರ್ಯವನ್ನು ಅವರು ಪುರಂದರದಾಸರು ಮತ್ತು ಜ್ಞಾನದೇವ ಇದರ ಅಧ್ಯಯನದ ಮುಖಾಂತರ ಮಾಡಿದ್ದಾರೆ. ಇದೊಂದು ಮಾದರಿಯ ಮಹಾಪ್ರಬಂಧ. ಇಂತಹ ಉತ್ತಮ ಮಹಾಪ್ರಬಂಧಗಳು ಬೆಳಕು ಕಾಣುವಂತಾಗಬೇಕು. ಇದರಿಂದ ಭಾಷಾ ಬಾಂಧವ್ಯ ಬೆಳೆಯುತ್ತದೆ ಎಂದು ನುಡಿದರಲ್ಲದೆ ನಿವೃತ್ತಿಯ ಬಳಿಕವೂ ಸಂಶೋಧನೆ ಕೈಗೊಂಡ ರಾಮಮೂರ್ತಿ ಅವರ ಸಾಧನೆ ನಮಗೆ ಮಾದರಿ ಎಂದು ಸಂತಸ ವ್ಯಕ್ತಪಡಿಸಿದರು.
ವಿಭಾಗದ ಅತಿಥಿ ಉಪನ್ಯಾಸಕ ಹಾಗೂ ಈ ಮಹಾಪ್ರಬಂಧಕ್ಕೆ ಮಾರ್ಗದರ್ಶನ ಮಾಡಿದ ಡಾ| ವಿಶ್ವನಾಥ್ ಕಾರ್ನಾಡ್ ಮಾತನಾಡಿ ರಾಮಮೂರ್ತಿ ಅವರು ಮಾಡಿದ ಕೆಲಸ ಘನವಾದುದು. ಬಹುಶಿಸಿನ ಅಧ್ಯಯನಕ್ಕೂ ಮಾದರಿ ಎಂದು ಅಧ್ಯಯನದ ಸಂದರ್ಭದ ನೆನಪುಗಳನ್ನು ಹಂಚಿಕೊಂಡರು.
ನನ್ನ ಗುರುಗಳಾದ ಡಾ| ಕಾರ್ನಾಡ್ ಅವರ ಮಾರ್ಗದರ್ಶನ ಮತ್ತು ಡಾ| ಜಿ.ಎನ್ ಉಪಾಧ್ಯ ಅವರ ಪ್ರೋತ್ಸಾಹದಿಂದ ಈ ಒಂದು ಮಹತ್ವದ ಅಧ್ಯಯನ ಮಾಡಲು ಸಾಧ್ಯವಾಯಿತು. ನನ್ನ ಹುಟ್ಟೂರು ಪುರಂದರದಾಸರು ವಾಸಸ್ಥಳದ ಸಮೀಪವಿದ್ದದ್ದು. ಮತ್ತು ಈಗಿನ ವಾಸಸ್ಥಳ ಪುಣೆ ಸಂತ ಜ್ಞಾನೇಶ್ವರರ ಸಮಾಧಿ ಸ್ಥಾನದ ಸಮೀಪವಿದ್ದದ್ದು ಈ ಅಧ್ಯಯನ ಮಾಡಲು ಪ್ರೇರಕವಾದುದು ಎಂದು ಅಭಿನಂದನಾ ಗೌರವಕ್ಕೆ ಉತ್ತರಿಸಿ ಡಾ| ರಾಮಮೂರ್ತಿ ಅವರು ತಿಳಿಸಿದರು. ಕನ್ನಡ ವಿಭಾಗದ ಡಾ| ದುರ್ಗಪ್ಪ ವೈ.ಕೋಟಿಯವರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
