ಮುಂಬಯಿ : ಕರ್ನಾಟಕ ರಾಜ್ಯೋತ್ಸವ-೨೦೧೨ ಪ್ರಶಸ್ತಿ ಪುರಸ್ಕೃತ ರಾಷ್ಟ್ರದ ಆರ್ಥಿಕ ರಾಜಧಾನಿ ಬೃಹನುಂಬಯಿಯಲ್ಲಿ ಶತಮಾನ ಮಿಕ್ಕಿದ ಸೇವಾ ನಿರತ ಸಂಸ್ಥೆ ಮೊಗವೀರ ವ್ಯವಸ್ಥಾಪಕ ಮಂಡಳಿಯಿಂದ ಸುಮಾರು ಎಂಟು ದಶಕಗಳಿಗೂ ಮಿಕ್ಕಿ ಪ್ರಕಾಶಿತ ‘ಮೊಗವೀರ’ವು ತನ್ನ ೮೨ನೇ ವರ್ಷಕ್ಕೆ ಪಾದಾರ್ಪಣೆಗೈದ ಸುಸಂದರ್ಭಕ್ಕಾಗಿ ಅಖಿಲ ಭಾರತ ಮಟ್ಟದಲ್ಲಿ ಕನ್ನಡ ಸಣ್ಣ ಕಥಾ ಸ್ಪರ್ಧೆ ಆಯೋಜಿಸಿದೆ. ಪ್ರಥಮ, ದ್ವಿತೀಯ, ತೃತೀಯ ಎಂದು ಆಯ್ಕೆಯಾದ ಉತ್ತಮ ಕಥೆಗಳಿಗೆ ಮೂರು ನಗದು ಬಹುಮಾನಗಳಿದ್ದು, ಪ್ರಥಮ ರೂ.೭೦೦೦/-, ದ್ವಿತೀಯ ರೂ.೫೦೦೦/- ತೃತೀಯ ರೂ.೩೦೦೦/- ನೀಡಲಾಗುವುದು ಎಂದು ಪತ್ರಿಕೆಯ ಸಂಪಾದಕ ಅಶೋಕ ಎಸ್.ಸುವರ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನ್ನಡ ಬರಹಗಾರರನ್ನು ಪ್ರೋತ್ಸಾಹಿಸುವ ಸದುದ್ದೇಶದಿಂದ ನಡೆಯುವ ಈ ಸ್ಪರ್ಧೆಯಲ್ಲಿ ಭಾಗವಹಿಸುವ ಕಥೆಗಾರರಿಗೆ ಪ್ರವೇಶ ಶುಲ್ಕವಿಲ್ಲದಿದ್ದು ಕೆಲವೊಂದು ನಿಯಮಗಳನ್ನು ಅನ್ವಯಿಸಲಾಯಿದೆ. ಆ ಪೈಕಿ ಕಥೆ ಸ್ವಂತ ರಚನೆ ಆಗಿರಬೇಕು. ಅನುವಾದಿತ ಕಥೆಗಳಿಗೆ ಅವಕಾಶವಿಲ್ಲ. ಒಬ್ಬರು ಒಂದೇ ಅಪ್ರಕಟಿತ ಕಥೆ ಕಳುಹಿಸಬೇಕು. ಉತ್ತಮ ಕಥಾವಸ್ತುವಿದ್ದು, ಭಾಷೆ, ಶೈಲಿ, ತಂತ್ರ- ಇವುಗಳು ಶ್ರೇಷ್ಠ ಮಟ್ಟದಲ್ಲಿದ್ದರೆ ಉತ್ತಮ. ಸಾಮಾಜಿಕ, ಆರ್ಥಿಕ, ರಾಜಕೀಯ, ಪತ್ತೇದಾರಿ, ಥ್ರಿಲ್ಲರ್, ಹಾರರ್, ಸೈನ್ಸ್ ಫಿಕ್ಷನ್-ಎಲ್ಲ ರೀತಿಯ ಸಭ್ಯ ಸಾಹಿತ್ಯಕ್ಕೂ ಅವಕಾಶವಿದೆ.
ಸ್ಪಷ್ಟವಾದ ಕೈಬರಹ, ಬೆರಳಚ್ಚು, ಕಂಪ್ಯೂಟರ್ ಮುದ್ರಿತ ಪ್ರತಿಗಳನ್ನು ಕಳುಹಿಸಬಹುದು. ಇ-ಮೇಯ್ಲ್ ಮೂಲಕ ನುಡಿ ತಂತ್ರಾAಶದಲ್ಲಿ ಕಂಪೋಸ್ ಮಾಡಿರುವ ಫೈಲ್ಗಳನ್ನು ಕಳುಹಿಸಬಹುದು. ಹಸ್ತಪ್ರತಿ, ಮುದ್ರಿತ ಪ್ರತಿ, ಸಾಫ್ಟ್ ಕಾಪಿ ಜೊತೆಗೆ ಪ್ರತ್ಯೇಕ ಕಾಗದದಲ್ಲಿ ವಿಳಾಸ, ಮೊಬೈಲ್ ಸಂಖ್ಯೆ ಬರೆದು ಫೋಟೋ ಅಂಟಿಸಿ ಕೃತಿಯೊಡನೆ ಲಗತ್ತೀಕರಿಸಬೇಕು. ಕಥೆ ಪುಟಗಳಲ್ಲಿ ಲೇಖಕರ ಹೆಸರು ಇರಬಾರದು. ಪಾಯಿಂಟ್ ಫಾಂಟ್ ಸೈಜಿನ ಮುದ್ರಿತ ಪ್ರತಿಯಲ್ಲಿ ಕನಿಷ್ಠ ೮ ಪುಟಗಳಷ್ಟು ಹಾಗೂ ಗರಿಷ್ಠ ೧೨ ಪುಟಗಳಷ್ಟು ಮೀರದಂತಿರಲಿ. ಮಿನಿಕಥೆಗಳು ಸ್ವೀಕರಿಸಲಾಗದು.
ವಿಜೇತರಿಗೆ ಚೆಕ್ ಮೂಲಕ ಬಹುಮಾನ ಮತ್ತು ಪ್ರಮಾಣ ಪತ್ರ ಕಳುಹಿಸಲಾಗುವುದು. ಬಹುಮಾನ ಗಳಿಸಿದ ಹಾಗೂ ಮೆಚ್ಚುಗೆ ಪಡೆದ ಕೃತಿಗಳನ್ನು ಮೊಗವೀರ ಮಾಸಿಕದ ಮುಂದಿನ ಸಂಚಿಕೆಗಳಲ್ಲಿ ಪ್ರಕಟಿಸಲಾಗುವುದು. ಪ್ರಕಟಿತ ಕೃತಿಗಳಿಗೆ ಮೊಗವೀರ ನಿಗದಿ ಪಡಿಸಿದ ಗೌರವ ಧನವನ್ನು ಕಳುಹಿಸಲಾಗುವುದು.ಕೃತಿಗಳ ಪ್ರತಿಗಳನ್ನು ಹಿಂದೆ ಕಳುಹಿಸಲಾಗುವುದಿಲ್ಲ. ತೀರ್ಪುಗಾರರ ನಿರ್ಣಯವೇ ಅಂತಿಮ, ಯಾವುದೇ ಪತ್ರ ವ್ಯವಹಾರಕ್ಕೆ ಅವಕಾಶವಿಲ್ಲ.
