ಬಂಟ್ವಾಳ :ಕೆಎಸ್ಸಾರ್ಟಿಸಿ ಐಸಿಯು ಬಸ್, ಕೋವಿಡ್ ಲಸಿಕೆ ಹಾಗೂ ಕಾರ್ಮಿಕ ಇಲಾಖೆ ಯಿಂದ ಆಹಾರ ಕಿಟ್ ವಿತರಣೆಯಲ್ಲಿ ತಾರತಮ್ಯವನ್ನು ವಿರೋಧಿಸಿ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮಂಗಳವಾರ ಬಿ.ಸಿ.ರೋಡ್ ಮಿನಿ ವಿಧಾನ ಸೌಧಕ್ಕೆ ದಿಢೀರ್ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ನೂರಾರು ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕುವ ವಿಷಯ ತಿಳಿದು ಮಿನಿ ವಿಧಾನ ಸೌಧದಲ್ಲಿ ಪೊಲೀಸರನ್ನು ನಿಯೋಜಿಸಿ ಬಾಗಿಲು ಮುಚ್ಚಲಾಗಿತ್ತು. ಬಾಗಿಲನ್ನು ದೂಡಿ ಒಳ ನುಗ್ಗಿದ ಪ್ರತಿಭಟನಾಕಾರರು ತಹಶಿಲ್ದಾರ್ ಕಚೇರಿಗೆ ತೆರಳಿ ಮಾತುಕತೆ ನಡೆಸಿದರು.
ತಹಶಿಲ್ದಾರ್ ಜೊತೆ ಮಾತುಕತೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಮಾನಾಥ ರೈ, ಕೆಎಸ್ಸಾರ್ಟಿಸಿ ಐಸಿಯು ಬಸ್ ಸರಕಾರದ್ದು. ಆದರೆ ಐಸಿಯು ಬಸ್ ಬಿಜೆಪಿ ಬೆಂಬಲಿತ ಪಂಚಾಯತ್ ಆಡಳಿತ ಇರುವಲ್ಲಿ ಅಲ್ಲಿನ ಅಧ್ಯಕ್ಷರಿಗೆ ಅದರ ಉಸ್ತುವಾರಿ ನೀಡಲಾಗುತ್ತಿದೆ. ಕಾಂಗ್ರೆಸ್ ಬೆಂಬಲಿತ ಆಡಳಿತ ಇರುವಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಉಸ್ತುವಾರಿ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಕೋವಿಡ್ ಸೋಂಕಿತರಿಗೆ ಸರಕಾರದಿಂದ ನೀಡುವ ಕಿಟ್ ಗಳನ್ನು ವಿತರಣೆ ಮಾಡುವ ಜವಾಬ್ದಾರಿ ಆಯಾಯ ಪಂಚಾಯತ್ ನ ಪಿಡಿಒಗೆ ಅಗಿದೆ. ಆದರೆ ಬಂಟ್ವಾಳದಲ್ಲಿ ಯಾರೋ ವ್ಯಕ್ತಿಗಳು ಮನೆ ಮನೆಗೆ ತಲುಪಿಸುತ್ತಿದ್ದಾರೆ. ಕಿಟ್ ನಲ್ಲಿ 2 ಸಾವಿರ ರೂಪಾಯಿಯ ಸಾಮಾಗ್ರಿಗಳು ಇರಬೇಕು. ಆದರೆ ಬಂಟ್ವಾಳದಲ್ಲಿ ನೀಡಲಾಗುತ್ತಿರುವ ಕಿಟ್ ನಲ್ಲಿ ಕೇವಲ 700 ರೂಪಾಯಿಯ ಸಾಮಾಗ್ರಿಗಳು ಇರುತ್ತದೆ. ಕಿಟ್ ವಿತರಣೆ ಅವ್ಯವಸ್ಥಿತದಿಂದ ಕೂಡಿದೆ ಎಂದು ರಮಾನಾಥ ರೈ ಆರೋಪಿಸಿದರು.
ಕೊರೋನ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿ ಇರುವ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಕಿಟ್ ವಿತರಣೆಯಾಗುತ್ತಿದೆ. ಆದರೆ ಬಂಟ್ವಾಳ ಕ್ಷೇತ್ರದಲ್ಲಿ ಯಾವುದೇ ಅರ್ಹ ಕಾರ್ಮಿಕರಿಗೆ ಕಿಟ್ ದೊರೆತಿಲ್ಲ. ಕಾರ್ಮಿಕರಿಗೆ ಸಿಗಬೇಕಾದ ಕಿಟ್ ಗಳು ಯಾರದ್ದೋ ಮನೆಗೆ ತಲುಪಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಕೋವಿಡ್ ಲಸಿಕೆ ನೀಡುವುದರಲ್ಲೂ ತಾರತಮ್ಯ ಮಾಡಲಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ನೀಡಲು ಸಾಕಷ್ಟು ವ್ಯವಸ್ಥೆ ಇದ್ದರೂ ಬಿಜೆಪಿ ಆಡಳಿತ ಇರುವಲ್ಲಿ ಪಂಚಾಯತ್ ಕಟ್ಟಡದಲ್ಲಿ ಲಸಿಕೆ ನೀಡಲಾಗುತ್ತಿದೆ. ಇದರಲ್ಲಿ ಆರೋಗ್ಯ ಇಲಾಖೆ ಕೂಡಾ ಶಾಮೀಲಾಗಿದೆ ಎಂದು ಅವರು ಆರೋಪಿಸಿದರು.
ಇಲ್ಲಿನ ಶಾಸಕರು ರಾಜಕೀಯ ಮಾಡುವುದನ್ನು ರಾಜ್ಯ ಧರ್ಮ ಅಂದುಕೊಂಡಿದ್ದಾರೆ. ರಾಜಕೀಯ ಮಾಡುವುದು ರಾಜ್ಯ ಧರ್ಮ ಅಲ್ಲ. ಎಲ್ಲ ಜನರನ್ನು ಸಮಾನವಾಗಿ ಕಾಣುವುದು ರಾಜ್ಯ ಧರ್ಮವಾಗಿದೆ. ಕ್ಷೇತ್ರದಲ್ಲಿ ಇದೇ ರೀತಿ ತಾರತಮ್ಯ ನೀತಿ, ಅವ್ಯವಸ್ಥೆಗಳು ಮುಂದುವರಿದರೆ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಪ್ರತಿಭಟನಾ ನಿರತರು ಬಿಜೆಪಿ ಪಕ್ಷ, ಆರೋಗ್ಯ ಇಲಾಖೆ, ಬಂಟ್ವಾಳ ತಾಲೂಕು ಆಡಳಿತ, ಬಂಟ್ವಾಳ ಶಾಸಕರಿಗೆ ಧಿಕ್ಕಾರ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನೆಯಲ್ಲಿ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ,ಪದ್ಮಶೇಖರ್ ಜೈನ್, ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಅಬ್ಬಾಸ್ ಅಲಿ, ಬಂಟ್ವಾಳ ಪುರಸಭಾ ಸದಸ್ಯ ಮುಹಮ್ಮದ್ ಶರೀಫ್,ಉಪಾಧ್ಯಕ್ಷರು ಶ್ರೀ ಜೇಸಿಂತ ಡಿ’ಸೋಜ,ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಜಯಂತಿ ವಿ ಪೂಜಾರಿ ಮತ್ತು ಶ್ರೀಮತಿ ಲವೀನಾ ವಿಲ್ಮಾ ಮೋರಸ್,ಪುರಸಭಾ ಸದಸ್ಯರಾದ ಅಬೂಬಕ್ಕರ್ ಸಿದ್ದೀಕ್ ಬೋಗೋಡಿ,ಗಂಗಾಧರ್, ಲೋಲಾಕ್ಷ ಶೆಟ್ಟಿ,ಜನಾರ್ದನ ಚೆಂಡ್ತಿಮಾರ್, ಬೂಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ನವಾಝ್ ಬಡಕಬೈಲ್,ಪ್ರಮುಖರಾದ ಮಾಯಿಲಪ್ಪ ಸಾಲ್ಯಾನ್, ಮುಹಮ್ಮದ್ ನಂದಾವರ, ಯೂಸುಫ್ ಕರಂದ್ಲಾಡಿ,ಪ್ರಶಾಂತ್ ಕುಲಾಲ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
