ಕೈಕಂಬ : ಕುಪ್ಪೆಪದವಿಗೆ ಹತ್ತಿರದ ಕಾಡಕ್ಕೇರಿ ಅಗರಿ ಕ್ರಾಸ್‍ನ ಅಪಾಯಕಾರಿ ತಿರುವಿನಲ್ಲಿ ಬೊಲೆರೋ-ಬೈಕ್ ಮುಖಾಮುಖಿ ಅಪಘಾತದಲ್ಲಿ ಬೈಕ್‍ನ ಹಿಂಬದಿ ಸವಾರ ರಸ್ತೆಗೆ ಎಸೆಯಲ್ಪಟ್ಟು ಸಾವಿಗೀಡಾದ ದಾರುಣ ಘಟನೆ ಆ. 4ರಂದು ನಡೆದಿದೆ.
ಮೃತ ವ್ಯಕ್ತಿ ಸದಾಶಿವ ಸಫಲಿಗ(43) ಎಂದು ಗುರುತಿಸಲಾಗಿದೆ. ತನ್ನ ಗೆಳೆಯನ ಬೈಕಿನಲ್ಲಿ ಕುಪ್ಪೆಪದವಿನಿಂದ ಕಲ್ಲಾಡಿಯ ಮನೆಗೆ ಹಿಂದಿರುಗುತ್ತಿದ್ದಾಗ ಎದುರಿನಿಂದ ಕುಪ್ಪೆಪದವಿನತ್ತ ಬರುತ್ತಿದ್ದ ಬೊಲೆರೋ ಜೀಪ್‍ಗೆ ಡಿಕ್ಕಿ ಹೊಡೆದಿದೆ. ಬೈಕ್‍ನ ಹಿಂಬದಿಯಲ್ಲಿದ್ದ ಸದಾಶಿವ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದು, ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾದರೂ, ದಾರಿಮಧ್ಯೆ ಕೊನೆಯುಸಿರೆಳೆದರು.
ಮೃತರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಇವರು ಮಂಗಳೂರಿನ ಸ್ಟೇಟ್ ಬ್ಯಾಂಕ್‍ನ ಇಂದಿರಾ ಕ್ಯಾಂಟೀನ್ ಬಳಿ ಗೂಡಂಗಡಿ ವ್ಯಾಪಾರ ನಡೆಸುತ್ತಿದ್ದರು. ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಕಳೆದ ಕೆಲವು ಸಮಯದಿಂದ ಮನೆಯಲ್ಲೇ ಇದ್ದರು. ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
