ಬಜ್ಪೆ : ಕೋವಿಡ್ ಲಾಕ್‍ಡೌನ್ ಜಾರಿಯಲ್ಲಿಲ್ಲದ ಅವಧಿಯಲ್ಲಿ ಲಾಕ್‍ಡೌನ್ ನೆಪವೊಡ್ಡಿ 2019-20ರ ಸಾಲಿನ ದ್ವಿತೀಯ ಹಂತದ ಗ್ರಾಮಸಭೆ ನಡೆಸದೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ ಉಲ್ಲಂಘಿಸಿದ ಪಡುಪೆರಾರ ಗ್ರಾಮ ಪಂಚಾಯತ್‍ನ ಅಧ್ಯಕ್ಷರ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ 1,000 ರೂ ದಂಡ ವಿಧಿಸಿ, ನೋಟಿಸು ಜಾರಿ ಮಾಡಿದೆ.
2019ರ ನವಂಬರ್ 29ರಂದು ಪಡುಪೆರಾರ ಗ್ರಾಪಂನ 2019-20ರ ಸಾಲಿನ ಗ್ರಾಮ ಸಭೆ ನಡೆಯಬೇಕಿದ್ದರೂ, ಸಭೆ ನಡೆದಿಲ್ಲ. ಕೋವಿಡ್ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಭೆ ನಡೆದಿಲ್ಲ ಎಂದು ಪಂಚಾಯತ್ ಉತ್ತರ ನೀಡಿತ್ತು. ಆದರೆ 2020ರ ಮಾರ್ಚ್ 23ರವರೆಗೆ ಲಾಕ್‍ಡೌನ್ ಜಾರಿಯಲ್ಲಿ ಇರಲಿಲ್ಲ. ಹಿಂದೆಯೂ ಕೆಲವು ಬಾರಿ ಗ್ರಾಮಸಭೆ ನಡೆಸದ ಅಧ್ಯಕ್ಷರು, ಕುಂಟು ನೆಪವೊಡ್ಡಿ ಗ್ರಾಮಸ್ಥರನ್ನು ಮೌನವಾಗಿಸಿದ್ದರು ಎಂದು ದೂರುದಾರರಾದ ರೋಶನ್ ಲೋಬೊ ಮತ್ತು ರೊನಾಲ್ಡ್ ರೋಡ್ರಿಗಸ್ ಆರೋಪಿಸಿದ್ದಾರೆ.
