ವಾಮಂಜೂರು: ಮಂಗಳವಾರ ರಾತ್ರಿಯಿಂದ ಎಡೆಬಿಡದೆ ಸುರಿದ ಮಳೆಗೆ ಹಲವೆಡೆ ತಡೆಗೋಡೆಗಳು ಕುಸಿದಿವೆ. ಕುಪ್ಪೆಪದವು ಪಂಚಾಯತ್ ವ್ಯಾಪ್ತಿಯ ಮಂಗ್ಲಿಚ್ಚಾರ್ ಗುರ್ಕಾರ ಗುಡ್ಡೆ ಎಂಬಲ್ಲಿ ಸದಾಶಿವ ಎಂಬವರ ಮನೆಯ ಪಕ್ಕದಲ್ಲಿ ಕಟ್ಟಿದ್ದ ತಡೆಗೋಡೆ ಕುಸಿದು ಮೋನಪ್ಪ ಎಂಬವರ ಮನೆಯ ಹಿಂಬದಿಗೆ ಬಿದ್ದಿದ್ದು, ಅಲ್ಲಿದ್ದ ವಿದ್ಯುತ್ ಕಂಬವೊಂದು ವಾಲಿಕೊಂಡು ಅಪಾಯದ ಹಂಚಿನಲ್ಲಿದೆ.

ಮೋನಪ್ಪ ಅವರ ಮನೆಗೆ ಯಾವುದೇ ಅಪಾಯವಾಗಿಲ್ಲ ಆದರೆ ಇದೆ ರೀತಿ ಮಳೆ ಸುರಿದರೆ ಇಲ್ಲಿ ಇನ್ನಷ್ಟು ಕುಸಿತವಾಗಿ ಸದಾಶಿವ ಅವರ ಮನೆಗೆ ಹಾನಿಯಾಗುವ ಅಪಾಯ ಎದುರಾಗಿದೆ. ಆಚಾರಿಜೋರ ಎಂಬಲ್ಲಿಯೂ ಮೈಮುನಾ ಇಬ್ರಾಹಿಂ ಮತ್ತು ನಝೀರ್ ಎಂಬವರ ಮನೆ ಬಳಿ ತಡೆಗೋಡೆ.ಮುತ್ತೂರು ಗ್ರಾಮಪಂಚಾಯತ್ ವ್ಯಾಪ್ತಿಯ ಬೊಳಿಯ ಹಿಂದೂ ರುದ್ರಭೂಮಿಯ ತಡೆಗೋಡೆ ಕುಸಿದು ನಷ್ಟ ಉಂಟಾಗಿದೆ.

ಮಾರ್ಗದಂಗಡಿ -ತಾಳಿಪ್ಪಾಡಿ ಕಾಂಕ್ರೀಟ್ ರಸ್ತೆಯ ಅಂಚಿನಲ್ಲಿ ಮಣ್ಣು ಕುಸಿದು ರಸ್ತೆ ಅಪಾಯಕ್ಕೆ ಸಿಲುಕಿದೆ. ತಾರೆಮಾರ್ ಸೈಟ್ ಎಂಬಲ್ಲಿ ಇತ್ತೀಚೆಗೆ ನಿರ್ಮಿಸಲಾದ ತಡೆಗೋಡೆಗೆ ಗುಡ್ಡ ಕುಸಿದಿದೆ, ಇಲ್ಲಿ ಇನ್ನಷ್ಟು ಗುಡ್ಡ ಕುಸಿದರೆ ಗುಡ್ಡದ ಮೇಲೆ ಇರುವ ಚೆನ್ನಮ್ಮ ಎಂಬವರ ಮನೆ ಅಪಾಯಕ್ಕೆ ಸಿಲುಕುವ ಸಂಭವವಿದೆ. ಪಿಡಬ್ಲ್ಯೂಡಿ ಇಂಜೀನಿಯರ್ ಇಲ್ಲಿ ಇನ್ನಷ್ಟು ಗುಡ್ಡ ಕುಸಿಯದಂತೆ ತಡೆಯಲು ಮೆಸ್ ಅಳವಡಿಸುವುದಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
