ಕೈಕಂಬ : ಕೊರೊನಾ ಮಹಾಮಾರಿಯಿಂದಾಗಿ ದೇಶಾದ್ಯಂತ ಜಾರಿಗೆ ಬಂದಿರುವ ಲಾಕ್‌ಡೌನ್ ಪರಿಣಾಮವಾಗಿ, ಕಳೆದ ಮೂರು ತಿಂಗಳಿಂದ ಮುಚ್ಚಲ್ಪಟ್ಟಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನವು ಸೋಮವಾರ(ಜೂ. ೮) ಭಕ್ತರಿಂದ ದೇವರ ದರ್ಶನಕ್ಕಾಗಿ ತೆರೆದಿರುತ್ತದೆ. ರಾಜ್ಯ ಸರ್ಕಾರದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಮಾರ್ಗಸೂಚಿಯಂತೆ ಪೊಳಲಿ ಶ್ರೀಕ್ಷೇತ್ರ ತೆರೆಯಲಿದ್ದು, ದೇವಾಲಯದ ಆಡಳಿತ ಮಂಡಳಿ ಹೇರಿರುವ ಸರ್ಕಾರಿ ಮಾರ್ಗಸೂಚಿಗಳಿಗೆ ಭಕ್ತರು ಮಾನ್ಯತೆ ನೀಡಬೇಕೆಂದು  ಪೊಳಲಿ ದೇವಸ್ಥಾನದಲಿ ಶಾಸಕ ರಾಜೇಶ್ ನಾಯಕ್ ನೇತೃತ್ವದಲ್ಲಿ  ಭಾನುವಾರ  ಆಡಳಿತ ಮಂಡಳಿ ಹಾಗೂ ದೇವಳದ ಅರ್ಚಕರೊಂದಿಗೆ ಚರ್ಚಿಸಿ ನಂತರ ಮಾಧ್ಯಮದೊಂದಿಗೆ ಮಾತನಾಡಿದರು.  ಪೊಳಲಿ ದೇವಳದ ಅರ್ಚಕ ಕೆ. ರಾಮ್ ಭಟ್, ದೇವಳದ ಕಾರ್ಯನಿರ್ವಹಣಾಧಿಕಾರಿ ಪ್ರವಿಣ್ ಮಾತಡಿದರು. ದೇವಳದ ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಮೊಕ್ತೇಸರರಾದ  ಚೇರಾ ಸೂರ್ಯನಾರಾಯಣ ರಾವ್  ಅರ್ಚಕರಾದ ಮಾಧವ ಭಟ್ ಅರ್ಚಕರಾದ ಪರಮೇಶ್ವರ ಭಟ್, ಅನಂತ ಭಟ್, ಪರಮೇಶ್ವರ ಭಟ್  ಸಮಾಲೋಚನೆಯಲ್ಲಿ ಭಾಗವಹಿಸಿದ್ದರು.
37a73427-db80-4ec1-9142-02b606d94368

ದೇವಸ್ಥಾನ ತೆರೆಯುವ ವಿಷಯದಲ್ಲಿ ಸರ್ಕಾರಿ ಧಾರ್ಮಿಕ ದತ್ತಿ ಇಲಾಖೆ ಹೊರಡಿಸಿರುವ ಮಾರ್ಗಸೂಚಿಗಳು ಇಂತಿವೆ :-
ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೊಳಪಡುವ ರಾಜ್ಯದ ಎಲ್ಲ `ಎ’, `ಬಿ’ ಮತ್ತು `ಸಿ’ ದರ್ಜೆ ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶವಿರುತ್ತದೆ. ಜನಸಂದಣಿ ಸೇರುವ ಉತ್ಸವಗಳಾದ ಬ್ರಹ್ಮ ರಥೋತ್ಸವ, ಜಾತ್ರೆ ಮೊದಲಾದ ವಿಶೇಷ ಪೂಜೆ ಅಥವಾ ಉತ್ಸವ-ಸೇವೆ ಮುಂದಿನ ಆದೇಶದವರೆಗೆ ನಿಷೇಧಿಸಲಾಗಿದೆ. ದೇವಸ್ಥಾನದ ಪ್ರವೇಶದ್ವಾರ ಮತ್ತು ಆವರಣದಲ್ಲಿ ಸ್ವಚ್ಚತೆ ಕಾಪಾಡುವುದು ಕಡ್ಡಾಯ. ದೇವಾಲಯಗಳಿಗೆ ಆಗಮಿಸುವ ಭಕ್ತಾದಿಗಳ ದೇಹದ ಉಷ್ಣತೆ(ಇನ್ಫ್ರಾರೆಡ್ ಥರ್ಮೋಮೀಟರ್) ತಪಾಸಣೆ ಮಾಡುವುದು ಮತ್ತು ಕೈಗಳಿಗೆ ಸ್ಯಾನಿಟೈಸರ್ ಬಳಸುವುದು ಕಡ್ಡಾಯಗೊಳಿಸಲಾಗಿದೆ.

ದೇವಾಲಯಗಳಿಗೆ ಆಗಮಿಸುವ ಭಕ್ತಾದಿಗಳು ಸಾಮಾಜಿಕ ಅಂತರ(ಆರು ಅಡಿ) ಕಾಪಾಡುವುದು, ಸರತಿ ಸಾಲಿಗೆ ಮಾರ್ಕ್ ಗುರುತಿಸುವುದು, ಭಕ್ತಾದಿಗಳು ಬಾಯಿ ಮತ್ತು ಮುಖ ಮುಚ್ಚುವಂತೆ ಮಾಸ್ಕ್ ಅಥವಾ ಮುಖವಸ್ತ್ರ ಧರಿಸುವುದು ಕಡ್ಡಾಯ. ಭಕ್ತಾದಿಗಳು ಪಾದರಕ್ಷೆಗಳನ್ನು ಅವರವರ ವಾಹನಗಳಲ್ಲಿ ಅಥವಾ ಪ್ರತ್ಯೇಕ ಸ್ಥಳಗಳಲ್ಲಿ ಬಿಡುವುದು, ಪಾದರಕ್ಷೆ ಧರಿಸಿ ದೇವಾಲಯದ ಆವರಣಕ್ಕೆ ಬರುವಂತಿಲ್ಲ. ದೇವಾಲಯದ ದರ್ಶನಕ್ಕೆ ಮುಂದಿನ ಆದೇಶದವರೆಗೆ ೬೫ ವರ್ಷ ವಯಸ್ಸಿನ ವೃದ್ಧರು/ ೧೦ ವರ್ಷದೊಳಗಿನ ಮಕ್ಕಳು, ಗರ್ಭಿಣಿ ಸ್ತ್ರೀಯರು ಆದಷ್ಟು ಮನೆಯಲ್ಲಿಯೇ ಇದ್ದು ಸಹಕರಿಸಬೇಕು. ಅಸ್ವಸ್ಥರಿಗೆ ದೇವಾಲಯದೊಳಗೆ ಪ್ರವೇಶ ನಿಷೇಧಿಸಲಾಗಿದೆ. ಭಕ್ತಾದಿಗಳು ದೇವಸ್ಥಾನಗಳ ಗೋಡೆ, ಕಂಬ, ವಿಗ್ರಹ, ರಥ, ಪಲ್ಲಕಿ, ಧಾರ್ಮಿಕ ಗ್ರಂಥ, ಪುಸ್ತಕ ಮೊದಲಾದ ವಸ್ತು ಸ್ಪರ್ಶಿಸುವಂತಿಲ್ಲ. ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳು, ದೇವಾಲಯದ ಒಳಾಂಗಣ ಸೇವಕರು ಹಾಗೂ ಇತರೆಲ್ಲ ಸಿಬ್ಬಂದಿಯು ತಮ್ಮ ಮೊಬೈಲ್‌ಗಳಲ್ಲಿ ಕಡ್ಡಾಯವಾಗಿ ಆರೋಗ್ಯ ಸೇತು ಆ್ಯಪ್ ಅಳವಡಿಸಿಕೊಳ್ಳಬೇಕು.

By suddi9

Leave a Reply

Your email address will not be published. Required fields are marked *