ಕೋಲಾರ: ಸರ್ಕಾರದ ಕೋವಿಡ್-19ರ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಕೈಗಾರಿಕೆಗಳನ್ನು ಆರಂಭಿಸಿ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಕೈಗಾರಿಕೋದ್ಯಮಿಗಳಿಗೆ ಕರೆ ನೀಡಿದರು.ಜಿಲ್ಲಾಡಳಿತ ಭವನದ ತಮ್ಮ ಕಚೇರಿ ಸಭಾಂಗಣದಲ್ಲಿ ಕರೆದಿದ್ದ ಜಿಲ್ಲೆಯ ಕೈಗಾರಿಕೆಗಳ ಒಕ್ಕೂಟದ ಪ್ರತಿನಿಧಿಗಳು, ವಿವಿಧ ಕೈಗಾರಿಕೆಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.29kolar1

ಕೋವಿಡ್-19ರ ರಾಜ್ಯ ಸರ್ಕಾರದ ಸ್ಟಾಂಡರ್ಡ್ ಆಪ್ ಆಪರೇಷನ್‍ನಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೈಗಾರಿಕೆಗಳನ್ನು ಆರಂಭಿಸಬಹುದಾಗಿದೆ ಎಂದು ತಿಳಿಸಿದರು.ಪ್ರತಿ ಕೈಗಾರಿಕೆಯ ಒಟ್ಟು ಕಾರ್ಮಿಕರಲ್ಲಿ ಶೇ.50 ರಷ್ಟು ಮಂದಿಯನ್ನು ಮಾತ್ರ ಕೆಲಸಕ್ಕೆ ಕರೆಸಿಕೊಳ್ಳಬಹುದು ಎಂದ ಅವರು, ಮಾಸ್ಕ್, ಸ್ಯಾನಿಟೈಸರ್,ಗ್ಲೌಸ್ ಕಡ್ಡಾಯವಾಗಿ ಬಳಸಬೇಕು ಎಂದು ಸಲಹೆ ನೀಡಿದರು.

ಹೊರ ಕಾರ್ಮಿಕರಿಗೆ ಅವಕಾಶವಿಲ್ಲ ಕೈಗಾರಿಕೆಗಳವರು ಕೇವಲ ಕೋಲಾರ ಜಿಲ್ಲೆಯಲ್ಲಿ ವಾಸವಿರುವ ಕಾರ್ಮಿಕರನ್ನು ಮಾತ್ರವೇ ಬಳಸಿಕೊಳ್ಳಬೇಕು,ಹೊರ ಜಿಲ್ಲೆಯ ಕಾರ್ಮಿಕರನ್ನು ಯಾವುದೇ ಕಾರಣಕ್ಕೂ ಕರೆಸಿಕೊಳ್ಳಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.ಹೊರ ಜಿಲ್ಲೆಯ ಕಾರ್ಮಿಕರು, ಅಧಿಕಾರಿಗಳನ್ನು ಕರೆಸಿಕೊಳ್ಳಲೇ ಬೇಕಾದಲ್ಲಿ ಅಂತಹ ಸಂದರ್ಭಗಳಲ್ಲಿ ಡಿಸಿಯವರ ಅನುಮತಿ ಕಡ್ಡಾಯ ಹಾಗೂ ಬಂದ ಕಾರ್ಮಿಕರ ಆರೋಗ್ಯ ತಪಾಸಣೆ, ವಾಹನ ತಪಾಸಣೆ ಮಾಡಿಯೇ ಕರೆಸಿಕೊಳ್ಳಬೇಕು ಎಂದರು.

ಜತೆಗೆ ಹೊರ ಜಿಲ್ಲೆಗಳಿಂದ ಬರುವ ಕಾರ್ಮಿಕರನ್ನು ಕ್ವಾರೆಂಟೈನ್‍ನಲ್ಲಿಟ್ಟು ಮತ್ತೆ ಕೋವಿಡ್ ಸಮಸ್ಯೆ ಪರಿಹಾರವಾಗುವವರೆಗೂ ಅಂದರೆ ಸರ್ಕಾರದ ಮುಂದಿನ ಆದೇಶದವರೆಗೂ ವಾಪಸ್ಸು ಕಳುಹಿಸುವಂತಿಲ್ಲ ಎಂದು ತಿಳಿಸಿದರು. ಹಸಿರುವಲಯ ಉಳಿಸಿಕೊಳ್ಳೋಣ ಕೋವಿಡ್ ಸೋಂಕು ಹರಡದ ಹಸಿರು ಜಿಲ್ಲೆ ಎಂದು ಕೋಲಾರವನ್ನು ಸರ್ಕಾರ ಘೋಷಿಸಿದೆ, ಇದಕ್ಕೆ ಚ್ಯುತಿ ಬಾರದಂತೆ ಎಲ್ಲಾ ಎಚ್ಚರಿಕೆ ವಹಿಸೋಣ ಈ ಕಾರ್ಯದಲ್ಲಿ ಕೈಗಾರಿಕೋದ್ಯಮಿಗಳು ಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಕರೋನಾ ಸೋಂಕು ಮುಕ್ತ ಜಿಲ್ಲೆಯಾಗಿ ಕೋಲಾರವಾಗಲು ಎಲ್ಲರ ಸಹಕಾರವಿದೆ, ಪೊಲೀಸರು, ಅಧಿಕಾರಿ,ಸಿಬ್ಬಂದಿ, ವೈದ್ಯರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಅನೇಕರ ಪರಿಶ್ರಮವಿದೆ ಅವರ ಸೇವೆಯನ್ನು ಗೌರವಿಸೋಣ, ಜಿಲ್ಲೆಯಲ್ಲಿ ಸೋಂಕು ನುಸುಳದಂತೆ ಎಲ್ಲಾ ಅಗತ್ಯ ಎಚ್ಚರಿಕೆ ವಹಿಸೋಣ ಎಂದರು.ಸಿಎಸ್‍ಆರ್ ನಿಧಿ ಕರೆ ಹೂಳೆತ್ತಲು ಬಳಸಿ ಜಿಲ್ಲೆಯ ಕೈಗಾರಿಕೆಗಳು ತಮ್ಮ ಸಿಎಸ್‍ಆರ್ ನಿಧಿಯನ್ನು ಯಾವ್ಯಾವುದೋ ಕಾರ್ಯಕ್ಕೆ ಬಳಸುವ ಬದಲಿಗೆ ಜಿಲ್ಲೆಯ ಜೀವಾಳವಾಗಿರುವ ಕೆರೆಗಳ ಹೂಳೆತ್ತಲು ಬಳಸವಂತೆ ಸಲಹೆ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಸ್ವಾಮಿ, ಕೈಗಾರಿಕಾ ಇಲಾಖೆ ಉಪನಿರ್ದೇಶಕ ರವಿಚಂದ್ರ, ಸಹಾಯಕ ನಿರ್ದೇಶಕ ವೆಂಕಟರಮಣ, ಶಾಹಿ ಗಾರ್ಮೆಂಟ್ಸ್‍ನ ಎಲ್.ರಘುರಾಜ್,ಶಿವಕುಮಾರ್,ಹೋಂಡಾ ಕಂಪನಿಯ ಪಾಟೀಲ್, ಶಿವಂನ ರಂಗನಾಥ್, ಮಿಟ್ಸುಬಿಷಿ ಕಂಪನಿಯ ಯತಿರಾಜ್, ಕೈಗಾರಿಕಾ ಒಕ್ಕೂಟದ ಮಹಮದ್ ಷಫಿಉಲ್ಲಾ, ಶಿವಪ್ರಕಾಶ್ ಮತ್ತಿತರರು ಹಾಜರಿದ್ದರು.

By Suddi9

Leave a Reply

Your email address will not be published. Required fields are marked *