ವಾಮಂಜೂರು : ಮಂಗಳೂರು ತಾಲೂಕು ಪಾಣಾರ ಯಾನೆ ನಲಿಕೆ ಸಮಾಜ ಸೇವಾ ಸಂಘ(ರಿ) ಮೂಡುಶೆಡ್ಡೆ ವಾಮಂಜೂರು ಇದರ ವಾರ್ಷಿಕೋತ್ಸವ, ಸನ್ಮಾನ ಸಮಾರಂಭ ನ. 24ರಂದು ಭಾನುವಾರ ವಾಮಂಜೂರಿನ ಶ್ರೀರಾಮ ಭಜನಾ ಮಂದಿರದಲ್ಲಿ ನಡೆಯಿತು.
ಗುರುಪುರ ಶ್ರೀ ವೈದ್ಯನಾಥ ದೈವಸ್ಥಾನದ ಆಡಳಿತ ಮೊಕ್ತೇಸರ ದೋಣಿಂಜೆಗುತ್ತು ಪ್ರಮೋದ್ ಕುಮಾರ್ ರೈ ಸಮಾರಂಭ ಉದ್ಘಾಟಿಸಿ ಮಾತನಾಡಿ, ನಲಿಕೆಯವರದ್ದು ಶ್ರೇಷ್ಠ ಸಮಾಜ. ದೈವದ ನುಡಿ ಮೂಲಕ ತುಳುನಾಡ ಸತ್ಯ ಕಾಪಾಡುವ ಕಲೆ ನಲಿಕೆಯವರದ್ದಾಗಿದೆ ಎಂದರು.
ಸ್ಥಳೀಯ ಕಾರ್ಪೊರೇಟರ್ ಹೇಮಲತಾ ರಘು ಸಾಲ್ಯಾನ್ ಮಾತನಾಡಿ, ಜಾತಿ-ಮತಗಳ ಪರಿಸರದಲ್ಲಿ ಬೆಳೆದವಳು ನಾನಲ್ಲ. ರಾಜಕೀಯಕ್ಕೆ ಬಂದ ಬಳಿಕ ಹಿಂದೂವಿಲ್ಲಿರುವ `ಎ’, `ಬಿ’, ಎಸ್ಸಿ/ಎಸ್ಟಿ ಎಂಬಿತ್ಯಾದಿ ಜಾತಿಗಳ ಬಗ್ಗೆ ತಿಳಿದುಕೊಂಡಿದ್ದೇನೆ. ಈಗ ಸರ್ಕಾರದ ಪ್ರಯೋಜನ ಪಡೆಯಲು ಇವೆಲ್ಲ ಅಗತ್ಯವಿದೆ. ನಲಿಕೆ ಅಥವಾ ಪಾಣಾರ ಸಮಾಜದ ಅಭಿವೃದ್ಧಿ ಪಾಲಿಕೆಯಿಂದ ನೆರವು ತೆಗೆಸಿ ಕೊಡುವೆ ಎಂದರು.
ಮೂಡುಶೆಡ್ಡೆ ಹಿಂದೂ ಯುವ ಸೇನೆ ಜಿಲ್ಲಾಧ್ಯಕ್ಷ ವೀರಪ್ಪ ಮಾತನಾಡಿ, ಇಂದು ನಮ್ಮ ಸಂಪ್ರದಾಯದ ನಲಿಕೆ ಮರೆಯಾಗುತ್ತಿದೆ. ಆಟಿ ಕಳೆಂಜ, ಮಾದಿರದಂತಹ ಜಾನಪದ ಕಲಾ ಕುಣಿತ ಪ್ರಕಾರ ಮಾಯವಾಗಿದೆ ಮತ್ತು ಸಂಧಿ-ಪಾಡ್ದಾನ ಬೇಡವಾಗಿದೆ. ಯುವಜನರು ಪಾಶ್ಚಾತ್ಯ ಕುಣಿತಕ್ಕೆ ಮಾರು ಹೋಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮೂಡುಶೆಡ್ಡೆ ಪಾಣಾರ ನಲಿಕೆ ಸಮಾಜ ಸೇವಾ ಸಂಘದ ಅಧ್ಯಕ್ಷ ಶೀನ ಪಾಣಾರ, ದೈವ ನರ್ತಕ ಸಂಜೀವ ಕಂದಾವರ ಬೈಲು ಇವರನ್ನು ಸನ್ಮಾನಿಸಲಾಯಿತು. ಹಾಗೂ ಕಾಪೋರೇಟರ್ ಹೇಮಲತಾ ರಘೂಸಾಲಿಯಾನ್ ಅವರನ್ನೂ ನಲಿಕೆ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಶಾಸಕ ಡಾ. ಭರತ್ ಶೆಟ್ಟಿ, ಮಾಜಿ ಕಾರ್ಪೊರೇಟರ್ ಜಯಪ್ರಕಾಶ್, ಶೆಡ್ಡೆ ಜನಾರ್ದನ, ಸುಂದರ, ಬೇಬಿರಾಜ್ ಮತ್ತಿತರರು ಇದ್ದರು. ರೋಹಿತ್ ವರದಿ ವಾಚಿಸಿದರು. ಕುಮಾರಿ ಬಿಂದು ಮತ್ತು ಪೂಜಾ ನಿರೂಪಿಸಿದರು. ಸಂಜೀವ ಕಜೆಪದವು ಸ್ವಾಗತಿಸಿ ವಂದಿಸಿದರು.
