ಬಜ್ಪೆ : ಬಜ್ಪೆಯ ಹೋಲಿ ಫ್ಯಾಮಿಲಿ ಪ್ರೌಢಶಾಲೆಯಲ್ಲಿ ಅ. 10ರಂದು ಕರ್ನಾಟಕ ಸರ್ಕಾರ ಒದಗಿಸಿರುವ 68 ಸೈಕಲ್ ವಿತರಣಾ ಕಾರ್ಯಕ್ರಮ ಜರುಗಿತು.ಅಧ್ಯಕ್ಷತೆ ವಹಿಸಿದ್ದ ಬಜ್ಪೆ ಗ್ರಾಪಂ ಅಧ್ಯಕ್ಷೆ ರೋಜಿ ಮಥಾಯಿಸ್ ಮಾತನಾಡುತ್ತ, ಗ್ರಾಮೀಣ ಭಾಗದ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಕರ್ನಾಟಕ ಸರ್ಕಾರ ಎಂಟು ವರ್ಷಗಳಿಂದ ಕನ್ನಡ ಮಾಧ್ಯಮ ಪ್ರೌಢಶಾಲಾ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ನೀಡುತ್ತಿದೆ.
ಸರ್ಕಾರ ನೀಡುವ ಸೈಕಲ್, ಪುಸ್ತಕ, ಶೂ ಹಾಗೂ ಸ್ಕಾಲರ್‍ಶಿಪ್ ಮೂಲಕ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಮುಂದೆ ಬಂದು ಶಾಲೆ, ಪಾಲಕರು ಹಾಗೂ ಸಮಾಜಕ್ಕೆ ಉತ್ತಮ ಹೆಸರು ತಂದು ಕೊಡಬೇಕು ಎಂದರು.ತಾಪಂ ಸದಸ್ಯೆ ಉಷಾ ಮಾತನಾಡಿ, ಸರ್ಕಾರದ ಸವಲತ್ತು ಸದುಪಯೋಗಪಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಸಿಂಥಿಯಾ ಡಿ’ಕುನ್ಹ ಸ್ವಾಗತಿಸಿದರು. ಶಿಕ್ಷಕ ವಾಸುದೇವ ರಾವ್ ಕುಡುಪು ಕಾರ್ಯಕ್ರಮ ನಿರೂಪಿಸಿದರೆ, ದೈಹಿಕ ಶಿಕ್ಷಕ ಪ್ರಶಾಂತ್ ವಂದಿಸಿದರು.


