ಕೈಕಂಬ:ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ನೀರಾವರಿಯ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು ಅಯಾಯ ಹವಾಮಾನಕ್ಕೆ ಅನುಗುಣವಾಗಿ ಸುಧಾರಿತ ಪದ್ದತಿಯಲ್ಲಿ ತೋಟಾಗಾರಿಕ ಬೆಳೆಗಳನ್ನು ಬೆಳೆಸುವ ಮೂಲಕ ರೈತರು ಹೆಚ್ಚಿನ ಲಾಭ ಗಳಿಸಬಹುದು ಎಂದು ಮಂಗಳೂರಿನ ತೋಟಾಗಾರಿಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜಾ ಹೇಳಿದರು. ಅವರು ಕುಪ್ಪೆಪದವಿನ ರೋಸಾರಿಯೋ ಅಗ್ರೋ ಇಂಡಸ್ಟ್ರೀಸ್ ಮುತ್ತೂರು, ಸಿ.ಪಿ.ಸಿ.ಆರ್.ಐ ಕಾಸರಗೋಡ್, ಮಂಗಳೂರು ತೆಂಗು ಉತ್ಪಾದಕರ ಜಿಲ್ಲಾ ಫೆಡರೇಶನ್, ದ.ಕ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ದ.ಕ. ಇವರುಗಳ ಜಂಟಿ ಆಶ್ರಯದಲ್ಲಿ ರೋಜಾರಿಯೋ ಆಗ್ರೋ ಇಂಡಸ್ಟ್ರೀಸ್ನ ವಠಾರದಲ್ಲಿ ನಡೆದ ತೆಂಗು ಮತ್ತು ತೋಟಾಗಾರಿಕಾ ಬೆಳೆಗಳ ಉತ್ಪಾದನೆ ಹಾಗೂ ಮಳೆ ನೀರು ಕೊಯ್ಲು ಮಾಹಿತಿ ಶಿಬಿರದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದರು.
ತೋಟಗಳಿಗೆ ನೀರುಣಿಸಲು ಅವೈಜ್ಞಾನಿಕ ಸ್ಪಿಂಕ್ಲರ್ಗಳನ್ನು ಅಳವಡಿಸುವುದರಿಂದ ಬೆಳೆಗಳಿಗೆ ಸಮರ್ಪಕವಾಗಿ ನೀರು ಲಭಿಸದೇ ನಿರೀಕ್ಷಿತ ಫಸಲು ಬಾರದೇ ರೈತರು ನಷ್ಟ ಅನುಭವಿಸುತ್ತಾರೆ. ಪ್ರಗತಿ ಪರ ಕೃಷಿಕ ರೊಸಾರಿಯೋ ಪಾರ್ಮ್ನ ಚಾನ್ಸ್ ಬ್ಯಾಪ್ಟಿಸ್ಟ್ ರೊಸಾರಿಯೋ ತೆಂಗಿನ ಮರಕ್ಕೆ ಹಾಲು ಮತ್ತು ನೀರು ಎರೆಯುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು. ತೆಂಗು ಬೆಳೆಯ ಉತ್ಪಾದನೆ ಮೌಲ್ಯವರ್ಧನೆ ಬಗ್ಗೆ ಮತ್ತು ಮಳೆ ಕೊಯ್ಲುವಿನಲ್ಲಿ ಆಧುನಿಕ ಕ್ರಮಗಳ ಬಗ್ಗೆ ಸಿ.ಪಿ.ಸಿ.ಆರ್. ವಿಜ್ಞಾನಿಗಳು ವೀಡಿಯೋ ಪ್ರದರ್ಶನದ ಮೂಲಕ ವಿವರವಾದ ಮಾಹಿತಿಯನ್ನು ನೀಡಿದರು.ದ.ಕ ಜಿಲ್ಲಾ ಲೀಡ್ ಬ್ಯಾಂಕ್ನ ಎಂ.ಪಿ.ಪ್ರವೀಣ್, ಸತೀಶ್ ಅತ್ತಾವರ, ಜ್ಞಾನ ಜ್ಯೋತಿ ಸರಕಾರದಿಂದ ರೈತರಿಗೆ ದೊರೆಯುವ ಸಾಲ ಸೌಲಭ್ಯಗಳ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು.
ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಶೆಟ್ಟಿ, ವಿಜ್ಞಾನಿಗಳಾದ ಡಾ.ನೀರಲ್, ಡಾ. ಸಂಶುದ್ಧೀನ್, ಡಾ.ಎ.ಸಿ.ಮ್ಯಾಥ್ಯೂ ಹಾಗೂ ನಿರ್ಮಿತಿ ಕೇಂದ್ರ ಮಂಗಳೂರು ಇದರ ಯೋಜನಾ ನಿರ್ದೇಶಕರಾದ ರಾಜೇಂದ್ರ ಕಲ್ಬಾವಿ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಸಂಚಾಲಕರಾದ ಮನೋಹರ್ ಶೆಟ್ಟಿ ನಡಿಕಂಬಳ ಗುತ್ತು ಮುಂತಾದವರು ಉಪಸ್ಥಿತರಿದ್ದರು.
ರೋಹಿತ್ ರೊಸಾರಿಯೋ ಸ್ವಾಗತಿಸಿ, ಹಸಿರು ಸೇನೆ ಜಿಲ್ಲಾ ಸಂಚಾಲಕರಾದ ದಯಾನಂದ ಶೆಟ್ಟಿ ಕುಳವೂರು ಕಾರ್ಯಕ್ರಮ ನಿರ್ವಹಿಸಿದರು. ಶೇಕ್ ಅಬ್ದುಲ್ಲಾ ವಂದಿಸಿದರು.
