ಬಂಟ್ವಾಳ:ಆಧುನಿಕ ತಂತ್ರಜ್ಞಾನ ಹೊಂದಿರುವ ಈ ದೇಶದಲ್ಲಿ ಹೊಸ ವೈಜ್ಞಾನಿಕ ಸಂಶೋಧನೆ ಮಾಡುವುದರ ಜೊತೆಗೆ ಮೂಲ ವಿಜ್ಞಾನ ವಿಷಯಗಳ ಬಗ್ಗೆಯೂ ಶಿಕ್ಷಣ ಸಂಸ್ಥೆಗಳು ಹೆಚ್ಚಿನ ಆದ್ಯತೆ ನೀಡುವ ಅವಶ್ಯಕತೆ ಇದೆ. ಇದಕ್ಕಾಗಿ ಕೇಂದ್ರ ಸರ್ಕಾರವು ನೀಡುತ್ತಿರುವ ‘ಸ್ಟಾರ್ ಕಾಲೇಜು’ ಮಾನ್ಯತೆ ಹೆಚ್ಚು ಪೂರಕ ಮತ್ತು ಪ್ರೋತ್ಸಾಹದಾಯಕವಾಗಿದೆ ಎಂದು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರೊನಾಲ್ಡ್ ನಜ್ರತ್ ಹೇಳಿದರು.

ಭಾರತ ಸರ್ಕಾರದ ಬಯೋಟೆಕ್ನಾಲಜಿ ಇಲಾಖೆ ವತಿಯಿಂದ ‘ಸ್ಟಾರ್ ಕಾಲೇಜು’ ಮಾನ್ಯತೆ ದೊರೆತ ಬಂಟ್ವಾಳ ಶ್ರೀ ವೆಂಕಟರಮಣ ಸ್ವಾವಿೂ ಕಾಲೇಜಿನಲ್ಲಿ ಗುರುವಾರ ನಡೆದ ‘ಸ್ಟಾರ್ ಕಾಲೇಜು’ ಯೋಜನೆ ಉದ್ಘಾಟನೆ ಮತ್ತು ಸರಣಿ ಉಪನ್ಯಾಸ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಈ ಮಾನ್ಯತೆ ದೊರೆತ ಬೆರಳೆಣಿಕೆಯ ಕಾಲೇಜುಗಳ ಪೈಕಿ ಈ ಕಾಲೇಜು ಕೂಡಾ ಸೇರ್ಪಡೆಗೊಂಡಿದೆ. ರಾಜ್ಯದಲ್ಲಿ ಒಟ್ಟು 11 ಕಾಲೇಜಿಗೆ ಮಾತ್ರ ಸ್ಟಾರ್ ಮಾನ್ಯತೆ ಸಿಕ್ಕಿದೆ ಎಂದು ಅವರು ತಿಳಿಸಿದರು.
ಸುರತ್ಕಲ್ ಎನ್.ಐ.ಟಿ.ಕೆ. ಕಾಲೇಜಿನ ರಸಾಯನ ಶಾಸ್ತ್ರ ಪ್ರಾಧ್ಯಾಪಕ ಡಾ. ಅರುಣ್ ಎಂ. ಇಸ್ಲೂರ್ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಆಲೋಚನೆಗಳಿಗೆ ಸ್ಪಂದಿಸಲು ಸ್ಟಾರ್ ಮಾನ್ಯತೆ ಅನುಕೂಲಕರವಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಪಾಂಡುರಂಗ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕಾಲೇಜಿನ ಉಪಪ್ರಾಂಶುಪಾಲೆ ಡಾ.ಎಚ್.ಆರ್. ಸುಜಾತ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸಂಯೋಜಕಿ ಶ್ರುತಿ ವಂದಿಸಿದರು. ವಿದ್ಯಾರ್ಥಿನಿ ಕಾವ್ಯಾ ಪ್ರಭು ಕಾರ್ಯಕ್ರಮ ನಿರೂಪಿಸಿದರು.
