ಬಜ್ಪೆ: ಅನಾಥಾಶ್ರಮದ ಹೆಸರಲ್ಲಿ ಹಣ ಸಂಗ್ರಹಿಸುತ್ತಿದ್ದ ಮೂವರನ್ನು ಸಾರ್ವಜನಿಕರು ಹಿಡಿದು ಬಜ್ಪೆ ಪೊಲೀಸರಿಗೆ ಒಪ್ಪಿಸಿದ ಘಟನೆ ಘಟನೆ ಶನಿವಾರ ಮಧ್ಯಾಹ್ನದ ಜಾವ ಕಟೀಲಿನಲ್ಲಿ ಸಂಭವಿಸಿದೆ.
ಇವರನ್ನು ಸುನಿಲ್ ಕಣ್ಣನ್, ಸುರೇಶ್ ಎಂದು ತಿಳಿಸಿದ್ದು ಮತ್ತೊಬ್ಬನ ಹೆಸರು ತಿಳಿದುಬಂದಿಲ್ಲ.
ಪ್ರಕೃತಿ ಆದಿವಾಸಿ ಫೌಂಡೇಶನ್ ಟ್ರಸ್ಟ್, ಯಶೋಧಪುರ, ಹುನ್ಸೂರು, ಮೈಸೂರು ಎಂಬ ಹೆಸರಿನಲ್ಲಿ ಅನಾಥಾಶ್ರಮದ ಹೆಸರಿರುವ ಕರಪತ್ರವನ್ನು ಹಿಡಿದು ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದರು. ಇದರಿಂದ ಅನುಮಾನಗೊಂಡ ಸಾರ್ವಜನಿಕರು ಮೂವರನ್ನೂ ವಿಚಾರಿಸಿ ಬಜ್ಪೆ ಪೊಲೀಸರಿಗೊಪ್ಪಿಸಿದ್ದಾರೆ.
ಪೊಲೀಸರು ವಿಚಾರಣೆ ನಡೆಸಿ ಅವರಲ್ಲಿದ್ದ ಗುರುತಿನ ಕಾರ್ಡ್ (ಐಡೆಂಟಿಟಿ ಕಾರ್ಡ್ ) ವಶಪಡಿಸಿ ಪರಿಶೀಲಿಸಿ ಅದರಲ್ಲಿದ್ದ ದೂರವಾಣಿ ಸಂಖ್ಯೆಗೆ ಕರೆ ಮಾಡಿದ್ದರು.
ಆಗ ಅದೊಂದು ಅಧಿಕೃತ ಸಂಸ್ಥೆ ಎಂದು ಪೊಲೀಸರಿಗೆ ಮನವರಿಕೆಯಾಗಿದೆ. ಈ ಗುರುತಿನ ಕಾರ್ಡ್ ನಲ್ಲಿ ಕಾರ್ಯದರ್ಶಿ ಎಂದು ಎಂ ಎಲ್ ಶಿವಾಜಿ ಎಂಬವರ ಹೆಸರಿದ್ದು, ಅಧ್ಯಕ್ಷರೆಂದು ವೈ ಕೆ ಶರ್ಮಾ ಎಂಬವರ ಹೆಸರಿದ್ದು ಇಬ್ಬರ ದೂರವಾಣಿ ಸಂಖ್ಯೆಯೂ ಇದೆ. ಪೊಲೀಸರು ಈ ದೂರವಾಣಿ ಸಂಖ್ಯೆಗೆ ಕರೆ ಮಾಡಿದಾಗ ಇದೊಂದು ಅಧಿಕೃತ ಸಂಸ್ಥೆ ಎಂದು ಸಂಸ್ಥೆಯವರು ಮಾಹಿತಿ ನೀಡಿದ್ದು, ಸಂಸ್ಥೆ ಹುಡುಗರನ್ನು ಹಣ ಸಂಗ್ರಹಕ್ಕಾಗಿ ಕರ್ನಾಟಕದ ನಾನಾ ಮೂಲೆಗೆ ಕಳಿಸುತ್ತಿರುವುದಾಗಿ ಮಾಹಿತಿ ಒದಗಿಸಿದ್ದಾರೆಂದು ತಿಳಿಸಿದ್ದಾರೆ. ಪೊಲೀಸರು ಮೂವರಿಗೂ ಇನ್ನೆಂದೂ ಈ ಭಾಗದಲ್ಲಿ ಹಣ ಸಂಗ್ರಹ ಮಾಡಲು ಹೋಗಬೇಡಿ, ಎಂಬ ಬುದ್ಧಿವಾದ ಹೇಳಿದ್ದು, ಸೂಕ್ತ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ ಎಂಬ ಮಾಹಿತಿ ಒದಗಿಸಿದ್ದಾರೆ.
ಹಣ ಸಂಗ್ರಹದ ಹೆಸರಲ್ಲಿ ಯುವಕರು ಸಾರ್ವಜನಿಕರ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದರಲ್ಲದೆ ಹಣ ಕೊಡಬೇಕೆಂದು ಪೀಡಿಸುತ್ತಿದ್ದರು. ಈ ಬಗ್ಗೆ ಪ್ರಶ್ನಿಸಿದಾಗ ಅಸ್ಪಷ್ಟ ಉತ್ತರ ಹೇಳುತ್ತಿದ್ದರು ಎಂದು ಸಾರ್ವಜನಿಕರು ಆರೋಪ ಮಾಡಿದ್ದಾರೆ.







.