ಸುದ್ದಿ9ಬಜ್ಪೆ: ತನ್ನ ಅಣ್ಣನ ಅಪ್ರಾಪ್ತ ಮಗಳ ಮೇಲೆಯೇ ಕಣ್ಣು ಹಾಕಿದ ಕಾಮಾಂಧನೋರ್ವ ಆಕೆಯ ಅತ್ಯಾಚಾರಗೈದ ಹೇಯ ಘಟನೆ ಇಲ್ಲಿಗೆ ಸಮೀಪದ ಅದ್ಯಪಾಡಿ ಎಂಬಲ್ಲಿ ಬೆಳಕಿಗೆ ಬಂದಿದೆ. ಆರೋಪಿ ಅದ್ಯಪಾಡಿ ನಿವಾಸಿ ಜಗದೀಶ ಪೂಜಾರಿ(32) ಎಂಬಾತನನ್ನು ಬಜ್ಪೆ ಠಾಣಾ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಘಟನೆಯ ವಿವರ: ಜಗದೀಶ ಪೂಜಾರಿ ವೃತ್ತಿಯಲ್ಲಿ ಟೈಲರ್ ಆಗಿದ್ದು, ಆತನ ಅಣ್ಣನ ಮಗಳಾದ 11ರ ಹರೆಯದ ಬಾಲಕಿಯ ಜೊತೆ ಸಲುಗೆ ಬೆಳೆಸಿಕೊಂಡಿದ್ದ. ಬಾಲಕಿ ಸ್ಥಳೀಯ ಶಾಲೆಯಲ್ಲಿ ಆರನೇ ತರಗತಿ ಓದಿಕೊಂಡಿದ್ದು ಆರೋಪಿ ಆಕೆಯನ್ನು ಆಗಾಗ ಕರೆದು ತಿಂಡಿ ಕೊಡುತ್ತಿದ್ದ. ಬಾಲಕಿ ಚಿಕ್ಕಪ್ಪನ ಸಲುಗೆಯ ಮರ್ಮವನ್ನು ಅರಿಯದೆ ಆತನ ಜೊತೆ ಒಡನಾಟ ಬೆಳೆಸಿದ್ದಳು.
ಕಳೆದ ಮೂರು ದಿನಗಳ ಹಿಂದೆ ಆರೋಪಿ ಜಗದೀಶ ಪೂಜಾರಿ ತನ್ನ ಟೈಲರ್ ಅಂಗಡಿಗೆ ಬಂದಿದ್ದ ಅಣ್ಣನ ಮಗಳನ್ನು ತಿಂಡಿ ಕೊಡುವುದಾಗಿ ನಂಬಿಸಿ ಮನೆಗೆ ಕರೆದೊಯ್ದಿದ್ದ. ಈ ವೇಳೆ ಮನೆಯಲ್ಲಿ ಯಾರೂ ಇದ್ದಿರಲಿಲ್ಲ. ಆರೋಪಿ ಮನೆಯ ಬಾಗಿಲನ್ನು ಭದ್ರಪಡಿಸಿ ಬಾಲಕಿಯ ಮೇಲೆ ಸೋಫಾದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಾಲಕಿ ಕೃತ್ಯವನ್ನು ಪ್ರತಿಭಟಿಸಿದ್ದರೂ ಆರೋಪಿಯ ಕಬಂಧಬಾಹುವಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.
ಅತ್ಯಾಚಾರದ ಬಳಿಕ ಆರೋಪಿ ಈ ಬಗ್ಗೆ ಯಾರಲ್ಲೂ ಹೇಳಬೇಡ, ಏನೂ ಆಗುವುದಿಲ್ಲ ಎಂದು ಹೇಳಿದ್ದಾನೆ. ಬಾಲಕಿ ನಂತರದ ದಿನಗಳಲ್ಲಿ ವಿಪರೀತ ಖಿನ್ನಳಾಗಿದ್ದು ಶಾಲೆಯಲ್ಲಿ ಶಿಕ್ಷಕಿ ವಿಚಾರಿಸಿದಾಗ ಅತ್ತು ಎಲ್ಲವನ್ನೂ ಹೇಳಿದ್ದಾಳೆ. ಶಾಲಾ ಶಿಕ್ಷಕಿ ಬಜ್ಪೆ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದು ಅವರು ಬಾಲಕಿಯನ್ನು ವಿಚಾರಣೆ ನಡೆಸಿ ಬಳಿಕ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದಾರೆ.
ಕಾಮುಕ ಜಗದೀಶ ಪೂಜಾರಿ ಏನೂ ನಡೆದೇ ಇಲ್ಲವೆಂಬಂತೆ ತನ್ನ ಟೈಲರ್ ಅಂಗಡಿಯಲ್ಲಿ ಆರಾಮಾಗಿದ್ದು ಪೊಲೀಸರು ಅಲ್ಲಿಂದಲೇ ಆತನನ್ನು ಕರೆದೊಯ್ದು ವಿಚಾರಣೆ ನಡೆಸಿದಾಗ ತಾನು ನಡೆಸಿದ ಹೀನಕೃತ್ಯವನ್ನು ಬಾಯ್ಬಿಟ್ಟಿದ್ದಾನೆ. ಪೊಲೀಸರು ಆರೋಪಿಯ ವಿರುದ್ಧ ಅತ್ಯಾಚಾರ, ಅಕ್ರಮ ಬಂಧನ ಹಾಗೂ ಅಪ್ರಾಪ್ತ ಮಕ್ಕಳ ಲೈಂಗಿಕ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ 15 ದಿನಗಳ ನ್ಯಾಯಾಂಗ ಸೆರೆ ವಿಧಿಸಿದೆ.

By suddi9

Leave a Reply

Your email address will not be published. Required fields are marked *