death-sentence

ಇರಾನ್ : ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಪ್ರವಾದಿ ಮುಹಮ್ಮದ್ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ ಹಾಕಿದ್ದ ವ್ಯಕ್ತಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ಬಗ್ಗೆ ವರದಿಯಾಗಿದೆ.

ಫೇಸ್ ಬುಕ್ ನಲ್ಲಿ  ಸಕ್ರಿಯವಾಗಿದ್ದ ಸೋಹೈಲ್ ಅರಬಿ ಎಂಬಾತ ವಿವಿಧ ಹೆಸರಿನಲ್ಲಿ 8 ಫೇಸ್ ಬುಕ್  ಪೇಜ್ ಗಳನ್ನು ನಿರ್ವಹಿಸುತ್ತಿದ್ದ. ಈ ಪೇಜ್ ಗಳಲ್ಲಿ ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಅಪ್ ಡೇಟ್ ಮಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ಸೊಹೈಲ್ ಅರಬಿ ಹಾಗೂ ಆತನ ಪತ್ನಿಯನ್ನುಇರಾನ್  ನ ರೆವೆಲ್ಯೂಶನರಿ ಗಾರ್ಡ್ಸ್ ಕಾರ್ಪ್ಸ್ (Revolutionary Guards Corps) ಅಧಿಕಾರಿಗಳು ಬಂಧಿಸಿದ್ದರು.

ಈ ಅಪರಾಧಕ್ಕಾಗಿ ಇರಾನ್ ನ ಟೆಹ್ರಾನ್ ಕ್ರಿಮಿನಲ್  ಕೋರ್ಟ್ ಶಾಖೆ 75ರ ನ್ಯಾಯಾಧೀಶ, ಸೋಹೈಲ್ ಅರಬಿಗೆ ಮರಣದಂಡನೆ  ವಿಧಿಸಿ ಆದೇಶ ಹೊರಡಿಸಿದ್ದಾರೆ. ಇಸ್ಲಾಮಿಕ್ ದಂಡ ಸಂಹಿತೆಯ 262ನೇ ವಿಧಿ ಪ್ರಕಾರ ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನ ಮಾಡಿದವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗುತ್ತದೆ. ಆದರೆ ಇಸ್ಲಾಮಿಕ್ ದಂಡ ಸಂಹಿತೆಯ 264ರ ಪ್ರಕಾರ ಕೋಪದಿಂದ ಅಥವಾ ತಿಳಿಯದೇ ಮೊಹಮ್ಮದ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರೆ ಮರಣ ದಂಡನೆಯನ್ನು 74 ಚಡಿ ಏಟು ಶಿಕ್ಷೆಗೆ ಪರಿವರ್ತನೆ ಮಾಡಲಾಗುತ್ತದೆ.

ವಿಚಾರಣೆ ವೇಳೆ ಸೋಹೈಲ್ ಅರಬಿ ಮಾನಸಿಕ ಸ್ಥಿತಿ ಸರಿಯಿಲ್ಲದ ಸಂದರ್ಭದಲ್ಲಿ ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನ ಮಾಡಿರುವುದಾಗಿ ತಿಳಿಸಿದ್ದರೂ ಆತನಿಗೆ ಮರಣದಂಡನೆ ವಿಧಿಸಿರುವುದಕ್ಕೆ ಇರಾನ್ ನಲ್ಲಿ ಕೆಲವರಿಂದ ಆಕ್ರೋಶ ವ್ಯಕ್ತವಾಗಿದೆ. ಸೋಹೈಲ್ ನೀಡಿರುವ ಕಾರಣಗಳನ್ನು ಕೋರ್ಟ್ ಪರಿಗಣಿಸದೇ ಶಿಕ್ಷೆ ವಿಧಿಸಿದೆ ಎಂದು ಇರಾನ್ ಜನತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಅರಬಿ ಬಂಧನ ರೀತಿಯನ್ನು ಅನೇಕರು ಟೀಕಿಸಿದ್ದಾರೆ.

ಮರಣದಂಡನೆ ಶಿಕ್ಷೆಯನ್ನು ಪ್ರಶ್ನಿಸುವುದಕ್ಕೆ ಸೋಹೈಲ್ ಗೆ ಸೆ.20ರ ವರೆಗೆ ಕಾಲಾವಕಾಶ ನೀಡಲಾಗಿದೆ.

By suddi9

Leave a Reply

Your email address will not be published. Required fields are marked *