ಸುರತ್ಕಲ್: ಕಳೆದ ರವಿವಾರ ಸೌದಿ ಅರೇಬಿಯಾದ ಜುಬೇಲ್ ಎಂಬಲ್ಲಿ ಕಾರ್ ಮಗುಚಿ ಸ್ಥಳದಲ್ಲೇ ಮೃತಪಟ್ಟಿದ್ದ ಜೋಕಟ್ಟೆ ಕಡೆಮನೆ ನಿವಾಸಿ ಟಿ.ಕೆ ಮುಹಮ್ಮದ್ ಹಾಗೂ ವಹೀದಾ ದಂಪತಿಯ ಪುತ್ರ ಶಕೀರ್(23) ಹಾಗೂ ಗುರುಪುರ ತಾಳಿಕಡವಿನ ಟಿ ಮುಹಮ್ಮದ್ ಹನೀಫ್ ಹಾಗೂ ಕೈರುನ್ನೀಸಾ ದಂಪತಿಯ ಪುತ್ರ ಶಾರುಖ್(22) ಎಂಬವರ ಅಂತ್ಯ ಸಂಸ್ಕಾರವನ್ನು ಅಲ್ಲೇ ನಡೆಸಲಾಗಿದೆ.
ಮೃತ ಶರೀರವನ್ನು ಊರಿಗೆ ತಲುಪಿಸಲು 21 ದಿನಗಳ ಕಾಲಾವಕಾಶ ಬೇಕಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಸೌದಿ ಅರೇಬಿಯಾದ ಕ್ಲೌಡ್ಸ್ ಕಂಪೆನಿಯಲ್ಲಿ ಉದ್ಯೋಗಿಗಳಾಗಿದ್ದ ಶಕೀರ್ ಹಾಗೂ ಶಾರುಖ್ ಕಾರ್ನಲ್ಲಿ ಸಂಚರಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿತ್ತು. ರಕ್ತದ ಮಡುವಲ್ಲಿ ಬಿದ್ದಿದ್ದ ಇವರನ್ನು ಆಸ್ಪತ್ರೆಗೆ ಸಾಗಿಸಲು ಅಲ್ಲಿ ಜನಸಂಚಾರ ಇರಲಿಲ್ಲ. ಇದರಿಂದಾಗಿ ನಿರಂತರ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ಮೃತಪಟ್ಟಿದ್ದರು.
ಶಕೀರ್ ತಾಯಿ ಅನಾರೋಗ್ಯದ ಹಿನ್ನೆಲೆಯಲ್ಲಿ ಅ.4ರಂದು ಊರಿಗೆ ಮರಳುವವರಿದ್ದರು. ಶಾರು 9 ತಿಂಗಳ ಮುಂಚೆ ಊರಿಗೆ ಮರಳಿ ಬಳಕ ಮತ್ತೆ ಸೌದಿಗೆ ತೆರಳಿದ್ದರು. ಇವರಿಬ್ಬರೂ ಆಪ್ತ ಸ್ನೇಹಿತರಾಗಿದ್ದು, ಜೊತೆಯಲ್ಲೇ ಪ್ರಾಣಕಳೆದುಕೊಂಡಿದ್ದಾರೆ.

