ಮೂಡುಬಿದಿರೆ: ಸಾವಿರಾರು ನೃತ್ಯಪಟುಗಳಿಗೆ ತರಬೇತಿ ನೀಡಿ ಅವರಿಗೆ ಉತ್ತಮ ಭವಿಷ್ಯ ರೂಪಿಸಿ ಸಮಾಜ ಕೊಡುಗೆ ನೀಡಿದ ಮೂಡುಬಿದಿರೆಯ `ಟಾಪ್ ಎಂಟರ್‍ಟ್ರೈನರ್ಸ್ ಡ್ಯಾನ್ಸ್ ಅಕಾಡೆಮಿ’ ಇಪ್ಪತ್ತೈದು ವರ್ಷ ಪೂರೈಸಿದ್ದು, ಇದೇ 29ರಂದು ಶನಿವಾರ ‘ರಿದಂ’ ಸಾಂಸ್ಕøತಿಕ ನೃತ್ಯೋತ್ಸವದ ಮೂಲಕ ರಜತ ಸಂಭ್ರಮವನ್ನು ಆಚರಿಸಲಿದೆ.
ಮೂಡುಬಿದಿರೆಯ ಯುವಕೊರಿಯೋಗ್ರಾಫರ್ ಆಗಿದ್ದ ಕಿರಣ್ ಕೋಟ್ಯಾನ್ ಮುಂದಾಳತ್ವದಲ್ಲಿ ಸಂಸ್ಥೆ ಸ್ಥಾಪನೆಗೊಂಡಿತ್ತು. 1995ರಲ್ಲಿ ವಿದ್ಯಾರ್ಥಿಯಾಗಿ ಸೇರ್ಪಡೆಗೊಂಡ ರೂಪೇಶ್ ಕುಮಾರ್ ಕೆಲವೇ ವರ್ಷಗಳಲ್ಲಿ ಉತ್ತಮ ನೃತ್ಯಪಟುವಾಗಿ ರೂಪುಗೊಂಡರು. 2005ರಲ್ಲಿ ಸಂಸ್ಥೆಯ ಹೊಣೆಗಾರಿಕೆ ಕಿರಣ್ ಕುಮಾರ್ ಅವರು ರೂಪೇಶ್ ಕುಮಾರ್‍ಗೆ ವಹಿಸಿಕೊಟ್ಟರು.
ಪ್ರಾರಂಭದಲ್ಲಿ ಮೂಡುಬಿದಿರೆ, ಕಾರ್ಕಳ, ಉಜಿರೆ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದ ಇವರ ನೃತ್ಯ ತರಬೇತಿ ತರಗತಿಗಳು ನಂತರ ಸಂಸ್ಥೆ ಬೆಳೆಯುತ್ತಾ ಹೋದಂತೆ ವೇಣೂರು, ಧರ್ಮಸ್ಥಳ, ಸಿದ್ಧಕಟ್ಟೆ, ನಾರಾವಿ ಸೇರಿದಂತೆ ಸುತ್ತಮುತ್ತಲಿನ ಊರುಗಳಿಗು ಶಾಖೆಗಳನ್ನು ವಿಸ್ತರಿಸಿ ಸುಮಾರು ಒಂದು ಸಾವಿರ ವಿದ್ಯಾರ್ಥಿಗಳಿಗೆ ನೃತ್ಯ ತರಬೇತಿಯನ್ನು ಕಲಿಸಿಕೊಟ್ಟರೆ ಆಯ್ದ 12 ಶಾಲೆಗಳಲ್ಲಿ ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಬೇರೆ ಬೇರೆ ವಿಭಾಗದ ನೃತ್ಯಪಟುಗಳನ್ನಾಗಿ ರೂಪಿಸಿದೆ. ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಅನೇಕ ನೃತ್ಯ ಕಾರ್ಯಕ್ರಮಗಳನ್ನು ನೀಡಿ 150ಕ್ಕೂ ಮಿಕ್ಕಿದ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಅಲ್ಲದೆ ಅನೇಕ ಟಿವಿ ರಿಯಾಲಿಟಿ ಶೋಗಳಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಸ್ಪರ್ಧಿಸಿದ್ದಾರೆ. ಸಂಸ್ಥೆಯಿಂದ ಕಲಿತ ಅನೇಕ ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ನೃತ್ಯಪಟುಗಳಾಗಿ ಹೆಸರು ಪಡೆದಿದ್ದಾರೆ. ಇನ್ನು ಕೆಲವರು ಸ್ವತರಬೇತಿ ಕೇಂದ್ರಗಳನ್ನು ಆರಂಭಿಸಿದ್ದಾರೆ.
ನೃತ್ಯ ತರಬೇತಿಕೇಂದ್ರಗಳಲ್ಲಿ ಪಾಶ್ಚಾತ್ಯ ಶೈಲಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಆದರೆ ಟಾಪ್ ಎಂಟರ್‍ಟ್ರೈನರ್ಸ್‍ನಲ್ಲಿ ಪಾಶ್ಚಾತ್ಯದ ಜತೆಗೆ ಭಾರತೀಯ ಸಂಸ್ಕøತಿಗು ಮಹತ್ವ ಸಿಗುತ್ತಿದೆ. ಜನಪದ, ಶಾರೀರಿಕ ವ್ಯಾಯಾಮ, ಚಿತ್ರಕಲೆ, ಪೈಂಟಿಂಗ್ ಹೀಗೆ ನೃತ್ಯದ ಜತೆಗೆ ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಕಲೆಯ ತರಬೇತಿಯು ಇಲ್ಲಿ ಸಿಗುತ್ತಿರುವುದು ಸಂಸ್ಥೆಯ ವೈಶಿಷ್ಟ್ಯ. ಪ್ರಸ್ತುತ 12 ಜನ ಕೊರಿಯೋಗ್ರಾಫರ್‍ಗಳು ಸಂಸ್ಥೆಯಲ್ಲಿದ್ದಾರೆ.
ಸಂಸ್ಥೆಯ ರಜತ ವರ್ಷದ ನೆನಪಿಗೆ ಇದೇ 29ರಂದು ಶನಿವಾರ ಸಂಜೆ 5 ಗಂಟೆಗೆ ಸ್ವರಾಜ್ಯ ಮೈದಾನದಲ್ಲಿ `ರಿದಂ’ ಸಾಂಸ್ಕøತಿಕ ನೃತ್ಯೋತ್ಸವವನ್ನು ಹಮ್ಮಿಕೊಳ್ಳಲಾಗಿದ್ದು ತುಳು ಚಿತ್ರರಂಗದ ತಾರೆಯರು, ಗಾಯಕ, ಗಾಯಕಿಯರು, ನೃತ್ಯಪಟುಗಳು, ವಿವಿಧ ಗಣ್ಯರು ಭಾಗವಹಿಸಿ ಕಾರ್ಯಕ್ರಮ್ಕಕೆ ವಿಶೇಷ ಮೆರುಗು ನೀಡಲಿದ್ದಾರೆ.
