ಬಂಟ್ವಾಳ:ತಾಲ್ಲೂಕಿನ ಬಿ.ಸಿ.ರೋಡು-ಪಾಣೆಮಂಗಳೂರು ನಡುವಿನ ಗೂಡಿನಬಳಿ ಎಂಬಲ್ಲಿ ಅಪ್ರಾಪ್ತ ಬಾಲಕಿಯನ್ನು ವೃದ್ಧನೊಬ್ಬ ಸಹಿತ ಮೂವರು ಸರಣಿ ಅತ್ಯಾಚಾರ ನಡೆಸಿದ ಪಾಪಿಗಳನ್ನು ಬಂಟ್ವಾಳ ನಗರ ಠಾಣೆ ಪೊಲೀಸರು ಬುಧವಾರ ರಾತ್ರಿ ಬಂಧಿಸಿದ ಘಟನೆ ಬೆಳಕಿಗೆ ಬಂದಿದೆ.ಬಂಧಿತ ಆರೋಪಿಗಳನ್ನು ಸ್ಥಳೀಯ ಗುಜರಿ ವ್ಯಾಪಾರಿ 65ರ ಹರೆಯದ ವೃದ್ಧ ಶೇಖಬ್ಬ, ಬೇಕರಿ ಸಾಮಾಗ್ರಿ ಸೇಲ್ಸ್ಮೆನ್ ರಝಾಕ್ ಯಾನೆ ಅಂಬಾರಿ(35) ಮತ್ತು ಸ್ಥಳೀಯ ನಿವಾಸಿ ಹಸನಬ್ಬ ಎಂಬವರ ಪುತ್ರ ಹೋಟೆಲ್ ಕಾರ್ಮಿಕ ನವಾಝ್(22) ಎಂದು ಗುರುತಿಸಲಾಗಿದೆ.
* ಶೇಖಬ್ಬ,

ಇಲ್ಲಿನ ಅಜ್ಜಿ ಮನೆಗೆ ಬಂದಿದ್ದ ನಾಲ್ಕನೇ ತರಗತಿ ವಿದ್ಯಾರ್ಥಿನಿ 8ರ ಹರೆಯದ ಬಾಲಕಿ ಇತರ ಮಕ್ಕಳೊಂದಿಗೆ ಕೆಲವು ದಿನಗಳ ಹಿಂದೆ ಆಟವಾಡುತ್ತಿದ್ದ ವೇಳೆ ಸ್ಥಳೀಯ ನಿವಾಸಿ ಅಬೂಬಕ್ಕರ್ ಎಂಬವರ ಬಾಡಿಗೆ ಮನೆಯಲ್ಲಿ ವಾಸವಾಗಿರುವ ರಝಾಕ್ ಎಂಬಾತನು ಆತ್ಯಾಚಾರ ಎಸಗಿದ್ದಾನೆ. ಈ ವಿಚಾರ ತಿಳಿದು ಇತರ ಇಬ್ಬರು ಆರೋಪಿಗಳು ಕೂಡಾ ಬಾಲಕಿಯನ್ನು ಬೆದರಿಸಿ ಪ್ರತ್ಯೇಕ ದಿನಗಳಲ್ಲಿ ಅತ್ಯಾಚಾರ ಎಸಗಿದ್ದರು. ಇತ್ತೀಚಿನ ದಿನಗಳಲ್ಲಿ ಬಾಲಕಿ ತೀರಾ ನೊಂದುಕೊಂಡಂತೆ ಕಂಡು ಬಂದ ಹಿನ್ನೆಲೆಯಲ್ಲಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಪರಿಶೀಲನೆ ನಡೆಸಿ ಮನೆಯವರಿಗೆ ವಿಚಾರ ತಿಳಿಸಿದ್ದಾರೆ.
* ರಝಾಕ್ ಯಾನೆ ಅಂಬಾರಿ
ಈ ಬಗ್ಗೆ ಮಾಹಿತಿ ತಿಳಿದು ಎಎಸ್ಪಿ ಋಷಿಕೇಶ್ ಸೋನಾವಾಣೆ, ಇನ್ಸ್ಪೆಕ್ಟರ್ ಟಿ.ಡಿ.ನಾಗರಾಜ್, ನಗರ ಠಾಣಾಧಿಕಾರಿ ಚಂದ್ರಶೇಖರ್, ಅಪರಾಧ ವಿಭಾಗ ಎಸೈ ಹರೀಶ್ ಮತ್ತಿತರರು ಬುಧವಾರ ರಾತ್ರಿ ಆರೋಪಿಗಳನ್ನು ಬಂಧಿಸಿ ಠಾಣೆಗೆ ಕರೆತಂದಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಜಮಾಯಿಸಿ ಆರೋಪಿಗಳ ಮನೆ ಮತ್ತು ವಾಹನಕ್ಕೆ ಕಲ್ಲು ತೂರಾಟ ನಡೆಸಿದ್ದಾರೆ. ತಕ್ಷಣವೇ ಹೆಚ್ಚುವರಿ ಪೊಲೀಸರು ಧಾವಿಸಿ ಗುಂಪು ಚದುರಿಸಿದ್ದಾರೆ.
* ನವಾಝ್

ನ್ಯಾಯಾಂಗ ಬಂಧನ:
ಆರೋಪಿಗಳನ್ನು ಗುರುವಾರ ಇಲ್ಲಿನ ಜೆಎಂಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 15ದಿನಗಳತನಕ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

