ಕೈಕಂಬ: ಸಾರ್ವಜನಿಕರಿಗೆ ನೀರು ಪೂರೈಸಲು ಗಂಜಿಮಠ ಪಂಚಾಯತ್ ವ್ಯಾಪ್ತಿಯ ಮಳಲಿ ಸೈಟ್ ಎಂಬಲ್ಲಿನ ದಲಿತ ಕಾಲೋನಿ ಪ್ರದೇಶದಲ್ಲಿ ನಿರ್ಮಿಸಿದ್ದ ನೀರಿನ ಟ್ಯಾಂಕ್ ಹಳತಾಗಿ ಕುಸಿಯುವ ಭೀತಿ ಎದುರಾಗಿದ್ದರಿಂದ ಅದನ್ನು ಕ್ರೇನ್ ಅಳವಡಿಸಿ ತೆರವುಗೊಳಿಸಲಾಗಿದೆ.

ಮಳಲಿ ಸೈಟ್ ಬಳಿ ಸಾರ್ವಜನಿಕರಿಗೆ ನೀರು ಪೂರೈಸಲು ಕೆಲವರ್ಷಗಳ ಹಿಂದೆ ಬೃಹತ್ ನೀರಿನ ಟ್ಯಾಂಕ್ ನಿರ್ಮಿಸಿದ್ದು, ಇತ್ತೀಚೆಗೆ ಅದು ತೀರಾ ಹಳತಾಗಿತ್ತಲ್ಲದೆ ಇದರ ಪಿಲ್ಲರ್ಗಳಿಗೆ ತುಕ್ಕು ಹಿಡಿದಿತ್ತು. ಇದರಲ್ಲಿ ನೀರು ತುಂಬಿಸಿ ಪೈಪ್ ಮೂಲಕ ಕಳಿಸುವುದರಿಂದ ನೀರಿನ ಭಾರಕ್ಕೆ ಕುಸಿಯುವ ಆತಂಕವನ್ನು ಇಲ್ಲಿನವರು ವ್ಯಕ್ತಪಡಿಸಿದ್ದರು. ನೀರಿನ ಟ್ಯಾಂಕ್ ಸಮೀಪವೇ ದಲಿತರ ಐದಾರು ಮನೆಗಳಿರುವುದರಿಂದ ಆತಂಕ ವ್ಯಕ್ತವಾಗಿತ್ತು.

ಗಂಜಿಮಠ ಪಂಚಾಯತ್ನ ಪಿಡಿಓ ಅವರು ತೆರವುಗೊಳಿಸುವ ಭರವಸೆಯೊಂದಿಗೆ ಇಂಜಿನಿಯರ್ಗಳು ಭೇಟಿ ನೀಡಿ ತೆರವುಗೊಳಿಸಲು ಸೂಚಿಸಿದ್ದರು. ಆದರೆ ಪಂಚಾಯತ್ ವತಿಯಿಂದ ಒಂದು ಲಕ್ಷ ರೂ.ಗೆ ಟೆಂಡರ್ ಕಲ್ಪಿಸಲಾಗಿತ್ತು. ಆದರೆ ಇದನ್ನು ತೆರವುಗೊಳಿಸಲು ಯಾರೂ ಮುಂದೆ ಬಂದಿರಲಿಲ್ಲ
ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಜಿಲ್ಲಾ ಕೊರಗ ಸಮಿತಿ ವತಿಯಿಂದ ಸ್ಥಳೀಯರು ಪಂಚಾಯತ್ ಮುಂದೆ ಪ್ರತಿಭಟನೆ ನಡೆಸಿ, ತಕ್ಷಣ ಟ್ಯಾಂಕ್ ತೆರವುಗೊಳಿಸಬೇಕು ಇಲ್ಲವಾದಲ್ಲಿ ಜಾಗಬಿಟ್ಟು ಕದಲುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು. ಈ ವೇಳೆ ಜಿಲ್ಲಾ ಪಂಚಾಯತ್ ಸದಸ್ಯ ಯು.ಪಿ. ಇಬ್ರಾಹಿಂ ಅವರು ಆಗಮಿಸಿ ತಕ್ಷಣ ತೆರವುಗೊಳಿಸಲಾಗುವುದು ಎಂದು ಭರವಸೆ ನೀಡಿ ಮನವೊಲಿಸಿದ ಕಾರಣ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಗಿತ್ತು.
ಇದಾದ ಬಳಿಕ ಕ್ರೇನ್ ಬಳಸಿ ಟ್ಯಾಂಕ್ ತೆರವುಗೊಳಿಸಿದ್ದಾರೆ. ಟ್ಯಾಂಕ್ನ ಮೇಲ್ಭಾಗಕ್ಕೆ ರೋಪ್ ಹಗ್ಗ ಬಳಸಿ ಪಿಲ್ಲರ್ಗಳನ್ನು ಕತ್ತರಿಸಿ ನಾಜೂಕಾಗಿ ತೆರವುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಪಾಯಕಾರಿ ಟ್ಯಾಂಕ್ ತೆರವುಗೊಂಡಿರುವುದರಿಂದ ಇಲ್ಲಿನ ನಿವಾಸಿಗಳು ನೆಮ್ಮದಿಯ ನಿಟ್ಟುಸಿರುವ ಬಿಟ್ಟಿದ್ದಾರೆ.
