ವಾಮಂಜೂರು: ಮಂಗಳೂರು ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮತ್ತು ವಾಮಂಜೂರಿನ ವಿದ್ಯಾಜ್ಯೋತಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಜಂಟಿ ಆಶ್ರಯದಲ್ಲಿ ಮಂಗಳವಾರ(ಜುಲೈ 24) ವಿದ್ಯಾಜ್ಯೋತಿ ಶಾಲೆಯಲ್ಲಿ 2018-19ರ ಸಾಲಿನ ಪ್ರೌಢ ಶಾಲಾ ಹೋಬಳಿ ಮಟ್ಟದ `ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆ’ ಉದ್ಘಾಟನೆಗೊಂಡಿತು.
ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆ ಇದಾಗಿದ್ದು, ಇಲ್ಲಿಂದಲೇ ಮಕ್ಕಳ ಪ್ರಯತ್ನ ಮುಂದುವರಿಯಬೇಕು. ಮಕ್ಕಳು ಪಠ್ಯದ ಜೊತೆಗೆ ಪಠ್ಯೇತರ ವಿಷಯಗಳಲ್ಲೂ ಆಸಕ್ತಿ ಹೊಂದಬೇಕೆಂಬ ಕಾಳಜಿ ಈ ಕಾರ್ಯಕ್ರಮದಲ್ಲಿದೆ ಎಂದು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಎಸ್ಆರ್ಎ ಕಾನ್ವೆಂಟಿನ ಮೇಲ್ವಿಚಾರಕಿ ಸಿಸ್ಟರ್ ರೀಮಾ ಕ್ರಾಸ್ತ ಅಭಿಪ್ರಾಯಪಟ್ಟರು.
ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಆರ್ ಲೋಕೇಶ್ ಮಾತನಾಡುತ್ತ, ಶಿಕ್ಷಕರು ಮಗುವಿನ ಪ್ರತಿಭೆ ಹೊರತರಲು ಪ್ರಯತ್ನಿಸಬೇಕು. ಒಬ್ಬೊಬ್ಬರಲ್ಲಿ ಒಂದೊಂದು ರೀತಿಯ ಪ್ರತಿಭೆ ಸ್ತುಪ್ತವಾಗಿದ್ದು, ಸ್ಪರ್ಧಾತ್ಮಕ ಕಾರ್ಯಕ್ರಮಗಳ ಮೂಲಕ ಅವು ಬೆಳಕಿಗೆ ಬರುತ್ತವೆ. ಇಂದಿನ ಮಕ್ಕಳಾದ ನೀವು ದೊಡ್ಡ ದೊಡ್ಡ ಕನಸಿನೊಂದಿಗೆ ಬೆಳೆಯಬೇಕು. ಅಂತಹ ಕನಸು ಸಾಕಾರಗೊಳಿಸಲು ಇಂತಹ ಸ್ಪರ್ಧೆಗಳು ಪೂರಕ. ಸೋಲಿಗೆ ಹತಾಶರಾಗದಿರಿ ಎಂದರು.
ಮಂಗಳೂರು ಶಿಕ್ಷಣಾಧಿಕಾರಿ ಹಿಲ್ಡಾ ಕ್ಷೆಮೆನ್ಸಿಯಾ ಪಿಂಟೋ ಪ್ರಸ್ತಾವಿಕವಾಗಿ ಮಾತನಾಡುತ್ತ, ವಿದ್ಯಾರ್ಥಿಗಳ ಪ್ರತಿಭೆ ಹೊರಗೆಡಹಲು ಮತ್ತು ಉತ್ತೇಜನ ನೀಡಲು ಶಿಕ್ಷಣ ಇಲಾಖೆ ಈ ಸ್ಪರ್ಧೆ ಹಮ್ಮಿಕೊಂಡಿದೆ. ಪ್ರತಿಭಾ ಕಾರಂಜಿಯ ವಿಜೇತರು ಜಿಲ್ಲಾ ಮತ್ತು ರಾಜ್ಯ ಮಟ್ಟಕ್ಕೆ ಆಯ್ಕೆಯಾದರೆ, ಕಲೋತ್ಸವ ವಿಜೇತರು ರಾಜ್ಯದಿಂದ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಲಿದ್ದಾರೆ. ಪ್ರಥಮ ಹಂತದಲ್ಲಿ ಈ ಬಾರಿ ಗುರುಪುರ `ಎ’, `ಬಿ’ ಮತ್ತು ಉಳ್ಳಾಲ `ಎ’, `ಬಿ’ ವಿಭಾಗದಲ್ಲಿ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆಗಳು ನಡೆಯಲಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ಕಾರ್ಪೊರೇಟರ್ ಹೇಮಲತಾ ಆರ್ ಸಾಲ್ಯಾನ್ ಮಾತನಾಡುತ್ತ, ಸೋಲು ಗೆಲುವುಗಳ ಬಗ್ಗೆ ಚಿಂತಿಸದೆ, ಮೊದಲಾಗಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಧೈರ್ಯ ತೆಗೆದುಕೊಳ್ಳಬೇಕು ಎಂದು ಸ್ಪರ್ಧಾಳುಗಳಿಗೆ ಶುಭ ಹಾರೈಸಿದರು.
ವೇದಿಕೆಯಲ್ಲಿ ವಾಮಂಜೂರು ಶ್ರಮಿಕ ಸೈಂಟ್ ಜೋಸೆಫ್ ಚರ್ಚಿನ ಧರ್ಮಗುರು ಪಾದರ್ ಅಶ್ವಿನ್ ಕ್ವಾಡ್ರಝೋ, ಶಾಲೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಪೌಲ್ ಫೆರ್ನಾಂಡಿಸ್, ರೂಪಕಲಾ ತಿರುವೈಲು, ದಕ್ಷಿಣ ಶಿಕ್ಷಣಾ ಸಂಯೋಜಕ ಫ್ರಾನ್ಸಿಸ್ ಮಿನೆಜಸ್, ದಕ್ಷಿಣ ವಲಯ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ್ ಶೆಟ್ಟಿ, ಜೋಯೆಲ್ ಲಾಸ್ರಾದೋ ಹಾಗೂ ವಿದ್ಯಾಜ್ಯೋತಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಅನ್ಸಿಲ್ಲಾ ಡಿ’ಮೆಲ್ಲೊ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಸಿಲ್ವಿಯಾ ಸಿಕ್ವೇರ ಇದ್ದರು. ಶಿಕ್ಷಕಿ ಮೇಘಾಶ್ರೀ ಮತ್ತು ಪಿಟಿಎ ಪದಾಧಿಕಾರಿ ಸಂಧ್ಯಾ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಕ ಪ್ರದೀಪ್ ಜಿ ವಂದಿಸಿದರು. ಗುರುಪುರ ಹೋಬಳಿ ಮಟ್ಟದಲ್ಲಿ ಒಟ್ಟು 29 ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
