ಬಂಟ್ವಾಳ: ಗೂಂಡಾ, ಕೋಮುವಾದದ ರಾಜಕೀಯ ಇನ್ನು ಮುಂದೆ ನಡೆಯಲು ಅವಕಾಶವಿಲ್ಲ. ಉಭಯ ಜಿಲ್ಲೆಗಳ ಬಿಜೆಪಿ ಶಾಸಕರು ಅಭಿವೃದ್ಧಿ, ಉತ್ಥಾನ ಮತ್ತು ಸಾಮರಸ್ಯಕ್ಕೆ ಒತ್ತು ನೀಡಲಿದ್ದಾರೆ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀ ಲ್ ಹೇಳಿದ್ದಾರೆ.
ತಾಲೂಕಿನ ಬಂಟವಾಳ ಬಂಟರ ಭವನದಲ್ಲಿ ಬಂಟ್ವಾಳ ಕ್ಷೇತ್ರ ಬಿಜೆಪಿ ವತಿಯಿಂದ ಮಂಗಳವಾರ ನಡೆದ ಪಕ್ಷದ ಕಾರ್ಯಕರ್ತರಿಗೆ ಅಭಿನಂದನೆ ಹಾಗೂ ಪೇಜ್ ಪ್ರಮುಖರ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.
ಬಂಟ್ವಾಳ ಸೇರಿದಂತೆ ಉಭಯ ಜಿಲ್ಲೆಯಲ್ಲಿ ಬಿಜೆಪಿ ಗೆಲುವಿಗೆ ಕಾರ್ಯಕರ್ತರ ಮತ್ತು ಪೇಜ್ ಪ್ರಮುಖರ ಅವಿರತ ಶ್ರಮ ಅಭಿನಂದನೀಯವಾಗಿದೆ ಎಂದರು.
ಜಿಲ್ಲೆಯಲ್ಲಿ ಬಿಜೆಪಿಯ ಗೆಲುವಿನಿಂದ ವಿಲವಿಲ ಒದ್ದಾಡುತ್ತಿರುವ ಕಾಂಗ್ರೆಸ್ ಮತ್ತೆ ಜಿಲ್ಲೆಯ ವಿವಿಧೆಡೆ ಗಲಭೆ ಸೃಷ್ಟಿಸಲು ಹುನ್ನಾರ ನಡೆಸುತ್ತಿದ್ದು, ದ್ವೇಷದ ರಾಜಕೀಯ ಮುಂದವರಿಸಿದಲ್ಲಿ ಮತದಾರರು ಕಾಂಗ್ರೆಸನ್ನು ಸಮುದ್ರಕ್ಕೆ ಎಸೆಯುವುದು ನಿಶ್ಚಿತ ಎಂದರು.
ಸಜ್ಜನಿಕೆ ಹಾಗೂ ಆದರ್ಶದ ರಾಜಕಾರಣಿಯಾಗಿರುವ ರಾಜೇಶ್ ನಾಯ್ಕ್ ರನ್ನು ಜನತೆ ಆಯ್ಕೆ ಮಾಡಿದ್ದಾರೆ. ಈ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ಮುಕ್ತ ಬಂಟ್ವಾಳವನ್ನು ಬಿಜೆಪಿ ಕಾರ್ಯಕರ್ತರು ಮಾಡಿದ್ದಾರೆ. ಪೇಜ್ ಪ್ರಮುಖರು ತಮ್ಮ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಹಿಂದಿನ ಎಲ್ಲಾ ಇತಿಹಾಸ ಮೀರಿ ಈ ಬಾರಿಯ ಗೆಲುವಿನ ಸಾಧನೆ ಆಗಿದೆ ಎಂದರು.
ವಿಧಾನಸಭೆಯ ಪ್ರತಿಪಕ್ಷದ ಮುಖ್ಯಸಚೇತಕ, ಕಾರ್ಕಳ ಶಾಸಕ ಸುನೀಲ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಬಿಜೆಪಿಯನ್ನು ಹಿಂದುತ್ವ ಗೆಲ್ಲಿಸಿದೆ. ಮುಂದಿನ ಚುನಾವಣೆಯಲ್ಲೂ ಹಿಂದುತ್ವದ ಆಧಾರದಲ್ಲಿಯೇ ಗೆಲ್ಲಲಿದೆ. ಬಂಟ್ವಾಳದಲ್ಲಿ ಹಿಂದುಗಳ ಸ್ವಾಭಿಮಾನ ಗೆದ್ದಿದೆ. ರಾಮನನ್ನು ಗೆಲ್ಲಿಸಿದ ಮತದಾರರಿಗೆ ಅಭಿನಂದನೆ ಎಂದು ಹೇಳಿದರು.
ಅಲ್ಲಾಹುವಿನ ಕೃಪೆಯಲ್ಲಿ ಗೆದ್ದಿರುವುದಾಗಿ ಹೇಳಿದ ರಮಾನಾಥ ರೈ ತನಗೆ ನ್ಯಾಯ ಬೇಕಾದಾಗ ಹಿಂದೂ ದೇವರ ಮೋರೆ ಹೋಗಿದ್ದಾರೆ ಎಂದ ಅವರು ಶಾಸಕ ರಾಜೇಶ್ ನಾಯ್ಕ್ ಅವರ ನೇತೃತ್ವದಲ್ಲಿ ಬಂಟ್ವಾಳದಲ್ಲಿ ಶಾಂತಿ, ನೆಮ್ಮದಿ ವಾತಾವರಣ ಸೃಷ್ಟಿಸಲು ಕಾರ್ಯಕರ್ತರು ಸಹಕರಿಸಬೇಕು ಎಂದು ಕರೆ ನೀಡಿದರು.
ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ ಮಾತನಾಡಿ, ಸಾಮಾನ್ಯ ಕಾರ್ಯಕರ್ತರೊಬ್ಬರನ್ನು ನಿಲ್ಲಿಸಿ ಚುನಾವಣೆ ಗೆಲ್ಲುವ ಮೂಲಕ ಮಾಜಿ ಸಚಿವ ರಮಾನಾಥ ರೈ ಅವರ ಸವಾಲನ್ನು ಗೆದ್ದಿದ್ದೆವೆ. ಧಮ್ ಇದ್ದರೆ ರಮಾನಾಥ ರೈ ಅವರು ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಲಿ, ಮೂರು ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ದೇಶದ ಹೃದಯವಿದ್ದಂತೆ ಅದು ಸ್ತಬ್ಧಗೊಂಡರೆ ದೇಶವೆ ಸ್ಥಬ್ಧವಾದಂತೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸುವ ಮೂಲಕ ಮೋದಿಯ ಕೈ ಬಲಪಡಿಸಬೇಕು ಎಂದು ಕರೆ ನೀಡಿದರು.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಾತನಾಡಿ, ಆಡಳಿತದಲ್ಲಿ ರಾಜಧರ್ಮ ಪಾಲಿಸುವುದರ ಜತೆಗೆ ಕಾರ್ಯಕರ್ತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಬಂಟ್ವಾಳ ಕ್ಷೇತ್ರದಲ್ಲಿ ಕ್ರಿಮಿನಲ್ ಚಟುವಟಿಕೆಗೆ ಆಸ್ಪದವಿಲ್ಲ ಎಂದು ತಿಳಿಸಿದರು.
ಈಗಾಗಲೇ ತನಗೆ ಕ್ಷೇತ್ರದಾಧ್ಯಂತ ಕಾರ್ಯಕರ್ತರು, ಅಭಿಮಾನಿಗಳು ತೊಡಿಸಿದ ಪೇಟ, ಹಾರ ತನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಮುಂದಿನ ದಿನದಲ್ಲೂ ಕಾರ್ಯಕರ್ತರ ಜತೆಯಲ್ಲಿಯೇ ಇದ್ದು, ಅವರ ಆಶೋತ್ತರಗಳಿಗೆ ಸ್ಪಂದಿಸುವುದಾಗಿ ತಿಳಿಸಿದ ಅವರು, ತನ್ನ ಗೆಲುವು ಕಾರ್ಯಕರ್ತರಿಗೆ ಸಂದ ಗೆಲುವಾಗಿದೆ ಎಂದರು.
ಈ ಸಂದರ್ಭದಲ್ಲಿ ನೂತನ ಶಾಸಕರನ್ನು ಅಭಿನಂದಿಸಲಾಯಿತು.
ಶಾಸಕರಾದ ಆರ್. ಲಾಲಾಜಿ ಮೆಂಡನ್, ಉಮಾನಾಥ ಕೋಟ್ಯಾನ್, ಎಸ್.ಅಂಗಾರ, ವಿಪಕ್ಷ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಸಂಜೀವ ಮಠಂದೂರು, ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಂತೋಷ ಕುಮಾರ್ ರೈ ಬೋಳಿಯಾರ್, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಪ್ರತಾಪಸಿಂಹ ನಾಯಕ್ ಬೆಳ್ತಂಗಡಿ ಸಭೆಯನ್ನುದ್ದೇಶಿಸಿ ಮಾತನಾಡಿ ಕಾರ್ಯಕರ್ತರು ಹಾಗೂ ಪೇಜ್ ಪ್ರಮುಖರನ್ನು ಅಭಿನಂದಿಸಿ ಮುಂದಿನ ಲೋಕಸಭಾ ಚುನಾವಣೆಗೂ ಸಜ್ಜಾಗುವಂತೆ ಕರೆ ನೀಡಿದರು.
ಶಾಸಕರಾದ ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಮಲ್ಲಿಕಾ ಪ್ರಸಾದ್ ಭಂಡಾರಿ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಸದಸ್ಯರಾದ ರವೀಂದ್ರ ಕಂಬಳಿ, ತುಂಗಪ್ಪ ಬಂಗೇರ, ಕಮಾಲಾಕ್ಷಿ ಪೂಜಾರ್ತಿ, ಧನಲಕ್ಷ್ಮಿ ಗಟ್ಟಿ, ರಾಜ್ಯ ಸಹ ವಕ್ತಾರೆ ಸುಲೋಚನ ಜಿ.ಕೆ.ಭಟ್, ಡಾ.ಪ್ರಸಾದ್ ಭಂಡಾರಿ ಪುತ್ತೂರು, ಪಕ್ಷದ ಪ್ರಮುಖರಾದ ಚಂದ್ರಶೇಖರ ಉಚ್ಚಿಲ್, ಜಿ.ಆನಂದ, ದಿನೇಶ್ ಅಮ್ಟೂರು, ಸತೀಶ್ ಕುಮೇರಡ್ಕ, ಕ್ಯಾ.ಬ್ರಿಜೇಶ್ ಚೌಟ, ರುಕ್ಮಯ ನಾಯ್ಕ್, ಸುಮೀತ್ ರಾಜ್, ಪೂಜಾ ಪೈ, ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿಗುತ್ತು ಮೊದಲಾವರು ವೇದಿಕೆಯಲ್ಲಿದ್ದರು.


