ಬಂಟ್ವಾಳ: ‘ಮಕ್ಕಳ ಕಲಾ ಲೋಕ’ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ವತಿಯಿಂದ ೧೬ನೇ ವರ್ಷದ ಮಕ್ಕಳ ಸಾಹಿತ್ಯ ಸಮ್ಮೇಳನವು ಡಿಸೆಂಬರ್ ೧೩ರಂದು ಓಜಾಲದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದೊಂದಿಗೆ ನಡೆಯಲಿದೆ. ಅದೇ ಶಾಲಾ ೬ನೇ ತರಗತಿ ವಿದ್ಯಾರ್ಥಿನಿ ಶ್ರುತಿಕಾ ಸಮ್ಮೇಳನಾಧ್ಯಕ್ಷರಾಗಿರುವರು.

೧೫ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ವಿಠಲ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ೧೦ನೇ ತರಗತಿ ವಿದ್ಯಾರ್ಥಿನಿ ಧನ್ಯಶ್ರೀ ಉದ್ಘಾಟಿಸುವರು. ಪುತ್ತೂರು ಪಾಣಾಜೆ ವಿವೇಕ ಹಿರಿಯ ಪ್ರಾಥಮಿಕ ಶಾಲಾ ೭ನೇ ತರಗತಿ ವಿದ್ಯಾರ್ಥಿನಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದು ಮಕ್ಕಳ ಕಲಾ ಲೋಕದ ಅಧ್ಯಕ್ಷ ರಮೇಶ ಎಂ. ಬಾಯಾರು ತಿಳಿಸಿದ್ದಾರೆ.

ದಿನವಿಡೀ ಜರಗುವ ಮಕ್ಕಳ ವಿವಿಧ ಸಾಹಿತ್ಯ ಕಾರ್ಯಕ್ರಮಗಳ ಸ್ವಾಗತ, ನಿರ್ವಹಣೆ, ಧನ್ಯವಾದ, ಗೋಷ್ಠಿಗಳ ಅಧ್ಯಕ್ಷತೆಯನ್ನು ತಾಲೂಕಿನ ವಿವಿಧ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ನಿರ್ವಹಿಸಲಿರುವರು. ನೂರಕ್ಕೂ ಅಧಿಕ ಸದಸ್ಯರಿರುವ ಸ್ವಾಗತ ಸಮಿತಿಯನ್ನು ಇಡ್ಕಿದು ಪಂಚಾಯತ್ ಅಧ್ಯಕ್ಷ ಎಂ. ಸುಧೀರ್ ಕುಮಾರ್ ಶೆಟ್ಟಿಯವರ ಗೌರವಾಧ್ಯಕ್ಷತೆ ಮತ್ತು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ ಬಿ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದು ವಿವಿಧ ಉಪಸಮಿತಿಗಳನ್ನೂ ರಚಿಸಲಾಗಿದೆ.

ಸ್ವಾಗತ ಸಮಿತಿಯ ಕಾರ್ಯಧ್ಯಕ್ಷರಾಗಿ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಚಿದಾನಂದ ಪೆಲತ್ತಿಂಜ, ಉಪಾಧ್ಯಕ್ಷರಾಗಿ ಸಿ.ಆರ್.ಪಿ. ಜ್ಯೋತಿ, ಪ್ರಧಾನ ಕಾರ್ಯದರ್ಶಿಯಾಗಿ ಮುಖ್ಯ ಶಿಕ್ಷಕ ಸಂಜೀವ ಮಿತ್ತಳಿಕೆ, ಕೋಶಾಧಿಕಾರಿಯಾಗಿ ಸುಮಯ್ಯ, ಜೊತೆ ಕಾರ್ಯದರ್ಶಿಯಗಿ ವಿಲ್ಮ
ಸೀಕ್ವೇರಾ ಸಹಕರಿಸಲಿದ್ದಾರೆ. ಸದಸ್ಯರಾಗಿ ಪಿಡಿಒ ಗೋಕುಲದಾಸ ಭಕ್ತ, ಗ್ರಾಮ ಪಂಚಾಯತ್ ಸದಸ್ಯರು, ಉಪಾಧ್ಯಕ್ಷೆ ಯಶೋಧ, ಎಸ್.ಡಿ.ಎಂ.ಸಿ. ಸದಸ್ಯರು, ಸ್ಥಳೀಯ ಸಂಘ ಸಂಸ್ಥೆಗಳು, ಶಾಲಾ ಶಿಕ್ಷಕರು, ಪಾಲಕರು ಸಹಕರಿಸುವರು.

ಮಕ್ಕಳಿಗೆ ಸ್ಥಳದಲ್ಲೇ ನೀಡುವ ವಿಷಯದಲ್ಲಿ ಸಾಹಿತ್ಯ ರಚನೆ, ಆಶು ಮಾತುಕತೆ, ಚಿತ್ತ ಚಿತ್ತಾರ ಮತ್ತು ಕಿರುನಾಟಕಗಳನ್ನು ಸಮ್ಮೇಳನದಲ್ಲಿ ಹಮ್ಮಿಕೊಳ್ಳಲಾಗಿದೆ. ಸಮಾರೋಪ ಸಮಾರಂಭದಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು ಭಾಗವಹಿಸಲಿದ್ದಾರೆ. ಮುಡಿಪು ಸರಕಾರಿ ಪ.ಪೂ ಕಾಲೇಜು ವಿದ್ಯಾರ್ಥಿನಿ ಲಾವಣ್ಯ ಸಮಾರೋಪ ಭಾಷಣ ನೀಡುವರು.

ಸಾಹಿತ್ಯ ತಾರೆ ಮತ್ತು ಬಾಲಬಂಧು ಪುರಸ್ಕಾರಗಳನ್ನು ಸಮಾರೋಪದಲ್ಲಿ ಪ್ರದಾನ ಮಾಡಲಿದೆ. ಪೂರ್ವಾಹ್ನ ಕ.ಸಾ.ಪ. ತಾಲೂಕು ಧ್ವಜಾರೋಹಣವನ್ನು ವಿಶ್ವನಾಥ ಬಂಟ್ವಾಳ, ಕನ್ನಡ ಧ್ವಜಾರೋಹಣವನ್ನು ಚಿದಾನಂದ ಪೆಲತ್ತಿಂಜ ನಿರ್ವಹಿಸುವರು. ಹಿರಿಯ ಸಾಹಿತಿ ವಿ.ಬಿ. ಕುಳಮರ್ವ ಕುಂಬಳೆ ಮಕ್ಕಳ ಸಾಹಿತ್ಯ ಕೃತಿಗಳನ್ನು ಬಿಡುಗಡೆ ಮಾಡುವರು.

By Suddi9

Leave a Reply

Your email address will not be published. Required fields are marked *