ಕುಪ್ಪೆಪದವು: ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದಂತೆ ಪೋಷಕರು ಮತ್ತು ಶಿಕ್ಷಕರು ನೋಡಿಕೊಳ್ಳಬೇಕು, ಎಷ್ಟೋ ವಿದ್ಯಾರ್ಥಿಗಳು ಮಾದಕ ದ್ರವ್ಯ ಸೇವನೆಯಂತಹ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಜೀವವನ್ನೆ ಹಾಳುಮಾಡಿಕೊಳ್ಳುತ್ತಾರೆ. ಕಾಲೇಜುಗಳಲ್ಲಿ ಕಾಣುತ್ತಿದ್ದ ಈ ದುಶ್ಚಟದ ಪಿಡುಗು ಇದೀಗ ಪ್ರೌಢಶಾಲಾ ಹಂತವನ್ನು ದಾಟಿ ಪ್ರಾಥಮಿಕ ಶಾಲಾ ಮಟ್ಟಕ್ಕೂ ಬಂದಿದೆ.
ಇದರಿಂದ ನಾವು ಎಚ್ಚೆತ್ತುಕೊಂಡು ಜಾಗೃತರಾಗಬೇಕಾಗಿದೆ ಎಂದು ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಜನಾರ್ಧನ್ ಗೌಡ ಮುಚ್ಚೂರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಕುಪ್ಪೆಪದವು ಕಲ್ಲಾಡಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ಪುಸ್ತಕಗಳನ್ನು ವಿತರಿಸಿ ಮಾತನಾಡಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಅರುಣಾ ಭಾಸ್ಕರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಶೆಟ್ಟಿ ಮುತ್ತೂರು, ಗ್ರಾ.ಪಂ.ಸದಸ್ಯ ಅಬೂಬಕ್ಕರ್ ಕಲ್ಲಾಡಿ, ವಿಮಲಾ, ಎಸ್.ಡಿ.ಎಮ್.ಸಿ.ಉಪಾಧ್ಯಕ್ಷ ಶಿವರಾಮ್ ಮತ್ತು ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಮೇರಿವಾಜ್ ಸ್ವಾಗತಿಸಿ ವಂದಿಸಿದರು. ಶಿಕ್ಷಕಿ ಸುಚಿತಾ ಕಾರ್ಯಕ್ರಮ ನಿರ್ವಹಿಸಿದರು.
