ಶ್ರೀನಿವಾಸಪುರ: ಪ್ರವಾಹ ಪರಿಸ್ಥಿತಿ ಇರುವುದರಿಂದ ವಿಶ್ವಕರ್ಮ ಜಯಂತಿ ಹಾಗೂ ಬ್ರಹ್ಮರ್ಷಿ ನಾರಾಯಣ ಗುರುಗಳ ಜಯಂತಿಯನ್ನು ಸರಳವಾಗಿ ಆಚರಿಸಲಾಗುವುದು ಎಂದು ತಹಶೀಲ್ದಾರ್ ಬಿ.ಎಸ್.ರಾಜೀವ್ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ವಿಶ್ವಕರ್ಮ ಜಯಂತಿ ಹಾಗೂ ಬ್ರಹ್ಮರ್ಷಿ ನಾರಾಯಣ ಗುರುಗಳ ಜಯಂತಿಯನ್ನು ಆಚರಿಸುವ ಸಂಬಂಧ ಚರ್ಚಿಸಲು ಸೋಮವಾರ ಕರೆಯಲಾಗಿದ್ದ ತಾಲ್ಲೂಕು ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು, ಸಾರ್ವಜನಿಕರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಜಯಂತಿಗೆ ಸಂಬಂಧಿಸಿದಂತೆ ಸರ್ಕಾರ ನೀಡುವ ಹಣವನ್ನು ಖರ್ಚು ಮಾಡಲಾಗುವುದು. ಸಂಬಂಧಿಸಿದ ಸಮುದಾಯ ಇನ್ನೂ ಹೆಚ್ಚಿನ ರೀತಿಯಲ್ಲಿ ಜಯಂತಿ ಉತ್ಸವ ನಡೆಸುವುದಾದರೆ ಯಾವುದೇ ಆಭ್ಯಂತರ ಇಲ್ಲ ಎಂದು ಹೇಳಿದರು.ಪಟ್ಟಣದ ಹೊರ ವಲಯದಲ್ಲಿನ ಸೋಮಪ್ಪನ ಮಠದ ಜಮೀನು ಒತ್ತುವರಿಯನ್ನು ಬಿಡಿಸಿ ವಿಶ್ವಕರ್ಮ ಸಮುದಾಯಕ್ಕೆ ನೀಡಬೇಕು. ಅಲ್ಲಿನ ಸ್ಮಶಾನ ಸ್ಥಳವನ್ನು ಪೂರ್ಣ ಪ್ರಮಾಣದಲ್ಲಿ ವಿಶ್ವಕರ್ಮ ಸಮುದಾಯ ಬಳಸಿಕೊಳ್ಳಲು ಅನುವು ಮಾಡಿಕೊಡಬೇಕು ಎಂದು ಕೋರಿ ತಾಲ್ಲೂಕು ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.
ಶಿರಸ್ತೇದಾರ್ ನಾರಾಯಣಸ್ವಾಮಿ, ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ತಾಲ್ಲೂಕು ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಮೋಹನಾಚಾರಿ, ಉಪಾಧ್ಯಕ್ಷ ಕೃಷ್ಣಮೂರ್ತಿ, ಕಾರ್ಯದರ್ಶಿ ರವಿಚಂದ್ರಾಚಾರಿ, ಉಪ ಕಾರ್ಯದರ್ಶಿ ಕೆ.ರಾಮಚಂದ್ರಾಚಾರಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
