ಸುದ್ದಿ9ಬಂಟ್ವಾಳ: ಕೆಲವು ಮನೆಗಳಲ್ಲಿ ಶೌಚಾಲಯ ಇಲ್ಲದೇ ಇರುವ ಮನೆಗಳಿಗೆ ಮುಂದಿನ ಗಾಂಧೀ ಜಯಂತಿ ಆಚರಣೆಯ ಒಳಗಾಗಿ ಶೌಚಾಲಯ ನಿರ್ಮಿಸಲು ಸೋಮವಾರ ಅಮ್ಟಾಡಿ ಗ್ರಾಮಪಂಚಾಯತ್ ನಲ್ಲಿ ನಡೆದ ಮಹಿಳಾ ಗ್ರಾಮಸಭೆ ಮಹತ್ವದ ನಿರ್ಣಯ ಕೈಗೊಂಡಿದೆ.
ಅಧ್ಯಕ್ಷೆ ಬಬಿತಾ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನಡೆದ ಮಹಿಳಾ ಗ್ರಾಮಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ ನಿರ್ಣಯ ಕೈಗೊಳ್ಳಲಾಯಿತು. ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಮಾಜಿ ಜಿಲ್ಲಾ ಒಂಬುಡ್ಸ್ಮನ್ ಶೀನ ಶೆಟ್ಟಿ ಹಾಗೂ ಜನಶಿಕ್ಷಣ ಟ್ರಸ್ಟ್ನ ಕೃಷ್ಣಮೂಲ್ಯ ಮಹಿಳಾ ಗ್ರಾಮಸಭೆಯ ಬಗ್ಗೆ ಮಾಹಿತಿ ನೀಡಿದರು. ಶೌಚಾಲಯ ನಿರ್ಮಾಣ ಎಲ್ಲರ ಆದ್ಯತೆಯಾಗಿದ್ದು ಪಂಚಾಯತ್ನೊಂದಿಗೆ ಎಲ್ಲರೂ ಸಹಕಾರ ನಿಡಬೇಕು ಎಂದರು. ಪೌಷ್ಟಿಕ ಆಹಾರ ಸೇವನೆ, ರಾಜಕೀಯ ಹಾಗೂ ಸಾಮಾಜಿಕ ಸಬಲೀಕರಣದ ಮತ್ತಿತರ ವಿಷಯಗಳ ಬಗ್ಗೆ ಮಹಿಳಾ ಗ್ರಾಮಸಭೆಯಲ್ಲಿ ಚರ್ಚೆ ನಡೆಯಿತು.
ಸಭೆಯಲ್ಲಿ ಗ್ರಾ.ಪಂ.ನ ಸದಸ್ಯೆ ಪುಷ್ಪಶೆಟ್ಟಿ, ಮಾಜಿಅಧ್ಯಕ್ಷೆ ಪೂರ್ಣಿಮ, ಮಾಜಿ ಸದಸ್ಯೆ ಭಾರತಿ ಚೌಟ, ಕೆಡಿಪಿ ಸದಸ್ಯೆ ಮಲ್ಲಿಕಾ ಶೆಟ್ಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಗಾಯತ್ರಿ ಕಂಬಳಿ, ಪಿಡಿಓ ಮಹಮ್ಮದ್ ವೇದಿಕೆಯಲ್ಲಿ ಹಾಜರಿದ್ದರು.

