ಕೈಕಂಬ: ಗುರುಪುರದಲ್ಲಿ ಅಪಘಾತಗಳ ಮೇಲೆ ಅಪಘಾತ ಸಂಭವಿಸುತ್ತಲೇ ಇದ್ದು ಬಲಿಗಾಗಿ ಹಾತೊರೆಯುತ್ತಿದೆ. ಶನಿವಾರ ನಾಲ್ಕರ ಸುಮಾರಿಗೆ ಲಾರಿ ಹಾಗೂ ಬೈಕ್ ಮಧ್ಯೆ ಅಪಘಾತ ಸಂಭವಿಸಿ ವ್ಯಕ್ತಿಯೋರ್ವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರುವಂತಾಗಿದೆ.

Photo0088
ಗಂಭೀರವಾಗಿ ಗಾಯಗೊಂಡವರನ್ನು ಪೊಳಲಿ ಸಮೀಪದ ಬಾಲಕೃಷ್ಣ ಕಾರಂತ(30) ಎಂದು ಗುರುತಿಸಲಾಗಿದೆ. ಇವರು ಎಲೆಕ್ಟ್ರಿಷಿಯನ್ ವೃತ್ತಿ ಮಾಡುತ್ತಿದ್ದರೆಂದು ತಿಳಿದುಬಂದಿದೆ.
ಗುರುಪುರ ಸಮೀಪದ ವನಭೋಜನ ತಿರುವಿನಲ್ಲಿ ಲಾರಿ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದು ಬೈಕ್ ಸವಾರ ಬಾಲಕೃಷ್ಣ ಅವರ ಬೈಕ್ ಸಂಪೂರ್ಣ ನುಜ್ಜುಗುಜ್ಜಾಗಿದ್ದು ಬೈಕ್ನಿಂದ ಕೆಳಗೆ ಬಿದ್ದಿದ್ದಾರೆ. ಆದರೆ ಲಾರಿ ಚಾಲಕ ತಕ್ಷಣ ಗಾಯಗೊಂಡು ಬಿದ್ದಿದ್ದ ಬಾಲಕೃಷ್ಣ ಅವರನ್ನು ಅಲ್ಲಿಗೆ ಕಾರ್ ಒಂದರಲ್ಲಿ ಕುಳ್ಳಿರಿಸಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದು ಚೇತರಿಸಿಕೊಂಡಿದ್ದಾರೆನ್ನಲಾಗಿದೆ.
ಇದೇ ಜೂನ್ 5ರಂದು ಬಾಲಕ ರೋಹಿತ್ ಎನ್ನುವವನ ಈಚರ್ ಲಾರಿಯೊಂದಕ್ಕೆ ಬಡಿದ ಪರಿಣಾಮ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದ. ಈ ಬಗ್ಗೆ ಭಾರೀ ಪ್ರತಿಭಟನೆ ನಡೆದಿತ್ತು ಆ ಬಳಿಕ ಹಂಪ್ಸ್ಗಳನ್ನು ಅಳವಡಿಸಲಾಗಿತ್ತು. ಆದರೆ ಹಂಪ್ಸ್ ಅಳವಡಿಸಿದ ಬಳಿಕ ಇದೀಗ ಮತ್ತೆ ಅಪಘಾತ ಸಂಭವಿಸಿದ್ದು ಗುರುಪುರ ಜನರನ್ನು ಮತ್ತಮತ್ತೆ ಬಲಿ ಪಡೆಯುತ್ತಲೇ ಇದೆ.
ನಿನ್ನೆ ನಡೆದ ಜಾಗದಲ್ಲಿ ಎರಡು ವರ್ಷದ ಮುಂಚೆ ರಿಕ್ಷಾಕ್ಕೆ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲೇ ದಾರುಣ ಅಂತ್ಯ ಕಂಡಿದ್ದರು. ಪೊಲೀಸರು ತಕ್ಷಣ ಸ್ಥಳಕ್ಕಾಗಮಿಸಿ ನಿರ್ವಹಣೆ ಕೈಗೊಂಡಿದ್ದರು. ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By Suddi9

Leave a Reply

Your email address will not be published. Required fields are marked *