ಮಂಗಳೂರು:ಇವಿಎಮ್ ಯಂತ್ರ ಬಗ್ಗೆ ಆಕ್ಷೇಪಗಳು ಎದ್ದಿರುವ ಬೆನ್ನಲ್ಲೆ ಚುನಾವಣಾ ಆಯೋಗ ಇದೀಗ ಪಂಚಾಯತ್ ಮಟ್ಟದಲ್ಲಿ ಇವಿಯಮ್ ತಂತ್ರಗಳನ್ನು ಪರಿಚಯಿಸಲು ಹೊರಟಿದೆ. ಮೊದಲ ಹಂತವಾಗಿ ಕಲಬುರಗಿ ಜಿಲ್ಲೆಯಿಂದಲೇ ಕಾರ್ಯರೂಪಕ್ಕೆ ತರಲು ಮುಂದಾಗಿದೆ. ಜೂ.14ರಂದು ನಡೆಯುವ ಜಿಲ್ಲೆಯ 15 ಗ್ರಾಪಂ ಚುನಾವಣೆಗೆ ಇವಿಎಂ (ವಿದ್ಯುನ್ಮಾನ ಮತ ಪೆಟ್ಟಿಗೆ) ಯಂತ್ರ ಬಳಸಲು ನಿರ್ಧರಿಸಲಾಗಿದೆ.
ಅಲ್ಲದೇ ಈ ಕುರಿತು ಯಂತ್ರಗಳನ್ನು ರೂಪಿಸಲು ಕಾರ್ಯಪ್ರವೃತ್ತಗೊಳ್ಳಲಾಗಿದೆ. ಇವಿಎಂ ಯಂತ್ರಗಳ ಪೂರೈಕೆ ಸಂಬಂಧವಾಗಿ ನೆರೆ ಜಿಲ್ಲೆಗಳಿಗೆ ಕಲಬುರಗಿ ಜಿಲ್ಲಾಧಿಕಾರಿ ಪತ್ರ ಬರೆದಿದ್ದಾರೆ. ಎರಡೂವರೆ ವರ್ಷದ ಹಿಂದೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವರವಟ್ಟಿ ಗ್ರಾಪಂನ ನಾವದಗಿ ಮತಗಟ್ಟೆಯಲ್ಲಿ ಪ್ರಾಯೋಗಿಕವಾಗಿ ಇವಿಎಂ ಯಂತ್ರಗಳ ಮೂಲಕ ಚುನಾವಣೆ ನಡೆಸಲಾಗಿತ್ತು. ಈಗ ಪೂರ್ಣ ಪ್ರಮಾಣದೊಂದಿಗೆ ಇವಿಎಂ ಯಂತ್ರ ಬಳಕೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಸಂಪೂರ್ಣ ಗ್ರಾಪಂ ಚುನಾವಣೆಯನ್ನು ಇವಿಎಂ ಯಂತ್ರದಿಂದಲೇ ನಿರ್ವಹಿಸಲು ಚುನಾವಣೆ ಆಯೋಗ ಯೋಜನೆ ಹೊಂದಿದ್ದು, ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಕಲಬುರಗಿ ಮೂಲಕ
ಇಡಲಾಗುತ್ತಿದೆ.
ಇವಿಎಂ ಮೂಲಕ ಗ್ರಾಪಂ ಚುನಾವಣೆ ನಡೆಯುತ್ತಿರುವುದರಿಂದ ಸಾರ್ವತ್ರಿಕ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಂತೆ ನುರಿತ ಅಧಿಕಾರಿಗಳನ್ನು ಬಳಕೆ ಮಾಡಿಕೊಳ್ಳಲಾಗುವುದಲ್ಲದೇ ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ಮತದಾರರಿಗೆ ಇವಿಎಂ ಮಾದರಿ ಯಂತ್ರಗಳ ಮೂಲಕ ಮಾಹಿತಿ ನೀಡಲಾಗುವುದು ಎಂದು ಕಲಬುರಗಿ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಮಾಹಿತಿ ನೀಡಿದ್ದಾರೆ.
ಉಪ ಕದನಕ್ಕೆ ಇವಿಎಂ ಯಂತ್ರವಿಲ್ಲ ಜಿಲ್ಲೆಯ 15 ಗ್ರಾಪಂಗಳ ಜತೆಗೆ ಜಿಲ್ಲೆಯ ವಿವಿಧ ಗ್ರಾಪಂಗಳಲ್ಲಿ ತೆರವು ಆಗಿರುವ 13 ಸದಸ್ಯ ಸ್ಥಾನಗಳಿಗೂ ಜೂ.14ರಂದೇ ಉಪ ಚುನಾವಣೆ ನಡೆಯುತ್ತಿದೆ. ಆದರೆ ಈ ಚುನಾವಣೆಗೆ ಇವಿಎಂ ಯಂತ್ರ ಬಳಕೆ ಮಾಡುತ್ತಿಲ್ಲ.

