ಮಂಗಳೂರಿನಲ್ಲಿ ಎಳನೀರಿಗೆ ತೀವ್ರ ಬರ
ಮಂಗಳೂರು: ಮಂಗಳೂರಿನಲ್ಲಿ ನಿಫಾ ವೈರಸ್ ಭೀತಿ ಬಹುತೇಕ ದೂರವಾಗುವ ಲಕ್ಷಣ ಕಾಣಿಸುತ್ತಿದ್ದಾಗಲೇ ದಾಹ ತೀರಿಸುವ ಎಳನೀರಿಗೆ ಬರ ಉಂಟಾಗಿರುವುದು ಕಂಡುಬಂದಿದೆ.
ಬೆಳಿಗ್ಗೆ ಹೊತ್ತು ನಗರದ ಹಲವೆಡೆ ಎಳನೀರು ಸಿಗುತ್ತದೆ. ಮಧ್ಯಾಹ್ನದ ನಂತರ ಎಲ್ಲೆಡೆ ಎಳನೀರಿಗೆ ಬರ ಕಾಣಿಸುತ್ತಿದೆ. ಅದೆಷ್ಟೋ ಕಡೆಗಳಲ್ಲಿ ಎಳೆನೀರಿಗಾಗಿ ಜನರು ಅಲೆದಾಡುವ ಪರಿಸ್ಥಿತಿ ಕಾಣಿಸುತ್ತಿದೆ.
‘ಚಿಕ್ಕಮಗಳೂರು ಭಾಗದಲ್ಲಿ ಅಕಾಲಿಕ ಮಳೆಯಾಗಿರುವುದರಿಂದ ಎಳನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಕರಾವಳಿ ಭಾಗದಲ್ಲಿ ಇದೀಗ ತೆಂಗಿನಕಾಯಿ ಬೆಲೆ ಗಗನಕ್ಕೆ ಏರಿರುವುದರಿಂದ ಎಳನೀರು ತೆಗೆಯುವುದಕ್ಕೆ ಕೃಷಿಕರು ಮನಸ್ಸು ಮಾಡುತ್ತಿಲ್ಲ’ ಎಂದು ಗುರುಪುರ-ಕೈಕಂಬ ಭಾಗದ ಎಳನೀರು ವ್ಯಾಪಾರಿಯೊಬ್ಬರು ಹೇಳಿದರು.
ರಂಜಾನ್ ಮಾಸದ ಸಂದರ್ಭದಲ್ಲಿ ಉಪವಾಸ ಬಿಡುವ ಸಂಜೆ ಹೊತ್ತಲ್ಲಿ ಹಣ್ಣುಗಳ ಜತೆಗೆ ಎಳನೀರಿಗೂ ಬಹಳ ಬೇಡಿಕೆ ಇದೆ. ಆದರೆ ನಗರದ ಹಲವೆಡೆ ಅದರ ಕೊರತೆ ತೀವ್ರವಾಗಿದೆ.