ಬಂಟ್ವಾಳ: ಅಂತರ್ಜಿಲ್ಲಾ ಬೈಕ್ ಕಳ್ಳನೋರ್ವನನ್ನು ಪುಂಜಾಲಕಟ್ಟೆ ಪೊಲೀಸರು ಸೋಮವಾರ ಸಿದ್ದಕಟ್ಟೆಯಲ್ಲಿ ಬಂಧಿಸಿದ್ದು ಆತನಿಂದ ಕಳವುಗೈದ ಬೈಕೊಂದನ್ನು ವಶಪಡಿಸಿಕೊಂಡಿದ್ದಾರೆ.
ವಿಟ್ಲಕಸ್ಬಾ ಗ್ರಾಮದ ಅಣ್ಣಮೂಲೆ ನಿವಾಸಿ ರಾಮಕೃಷ್ಣ ನಾಯ್ಕ ಎಂಬವರ ಪುತ್ರ ರವೀಶ್(33)ಎಂಬಾತ ಬೈಕ್ ಕಳವಿನ ಬಂಧಿತ ಆರೋಪಿಯಾಗಿದ್ದಾನೆ.
ಕಾವಳಕಟ್ಟೆಯ ಮೌಸಿನ್ ಎಂಬವರ ಬೈಕ್ ಜು.3 ರಂದು ರಾತ್ರಿ ಕಳವಾಗಿತ್ತು.ಈ ಬಗ್ಗೆ ಅವರು ಪುಂಜಾಲಕಟ್ಟೆ ಠಾಣೆಯಲ್ಲಿ ದೂರು ನೀಡಿದ್ದರು.ಖಚಿತ ಮಾಹಿತಿ ಮೇರೆಗೆ ಪುಂಜಾಲಕಟ್ಟೆ ಠಾಣಾ ಎಸ್ಸೈ ಲತೇಶ್ ಕುಮಾರ್ ಮತ್ತು ಸಿಬಂದಿಗಳು ಸಿದ್ದಕಟ್ಟೆಯಲ್ಲಿ ಆರೋಪಿಯನ್ನು ಬೆಳಗ್ಗೆ ಬಂಧಿಸಿದ್ದರು.ಬಳಿಕ ಆತನ ಮಾಹಿತಿಯಿಂದ ಬಂಟ್ವಾಳದಲ್ಲಿ ಬೈಕನ್ನು ವಶಪಡಿಸಿಕೊಂಡಿದ್ದರು.ಆತ ಅವಿಭಜಿತ ಜಿಲ್ಲೆಯಲ್ಲಿ ಹಲವೆಡೆ ಬೈಕ್ ಕಳ್ಳತನ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.ಆರೋಪಿಯನ್ನು ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
