ಬಂಟ್ವಾಳ: ಸುಮಾರು 8 ವರ್ಷಗಳಿಂದ ಅಭಿವೃದ್ದಿ ಕಾಣದೆ ಹೊಂಡಗಳಿಂದ ತುಂಬಿ ಹೋಗಿದ್ದ ಪಂಜಿಕಲ್ಲು ಕಲ್ಲು ಗ್ರಾಮದ ಆಚಾರಿಪಲ್ಕೆಯಿಂದ ಬಂಡಸಾಲೆ ಸಂಪಕರ್ಿಸುವ ರಸ್ತೆಯನ್ನು ಭಾನುವಾರ ಗ್ರಾಮಸ್ಥರೇ ಶ್ರಮದಾನ ನಡೆಸುವ ಮೂಲಕ ಪ್ರತಿಭಟಿಸಿದರು. ಪ್ರಗತಿಪರ ಕೃಷಿಕ ರಾಜೇಶ್ ನಾಯ್ಕ್ ವಿನೂತನ ಪ್ರತಿಭಟನೆಗೆ ಚಾಲನೆ ನೀಡಿದರು.
ಹಲವು ವರ್ಷಗಳಿಂದ ರಸ್ತೆ ದುರಸ್ಥಿ ಪಡಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಗಳ ಗಮನಕ್ಕೆ ತಂದರೂ ರಸ್ತೆ ಕಾಮಾಗಾರಿ ನಡೆದಿರಲಿಲ್ಲ. ಪ್ರತಿ ವರ್ಷ ಗ್ರಾಮಸ್ಥರೇ ಶ್ರಮದಾನ ನಡೆಸಿ ರಸ್ತೆಯಲ್ಲಿ ತಾತ್ಕಲಿಕವಾಗಿ ದುರಸ್ಥಿ ಪಡಿಸುತ್ತಿದ್ದರೂ ಸಂಬಂಧಪಟ್ಟವರ ಗಮನ ಇತ್ತ ಹರಿದಿರಲಿಲ್ಲ. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಒಟ್ಟಾಗಿ ಶ್ರಮದಾನ ನಡೆಸಿ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದು ಮುಂದಿನ ದಿನಗಳಲ್ಲಾದರೂ ರಸ್ತೆ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಿ ಎಂದು ಮನವಿ ಮಾಡಿದ್ದಾರೆ.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ರಾಜೇಶ್ನಾಕ್ ರಸ್ತೆ ದುರಸ್ತಿಗೆಂದು ಇಡೀ ದಿನ ಪ್ರತಿಭಟನೆ ನಡೆಸಿ ವ್ಯರ್ಥ ಮಾಡುವ ಮಾನವ ಶ್ರಮವನ್ನು ಶ್ರಮದಾನಕ್ಕೆ ಬಳಸಿಕೊಂಡರೆ ಸದ್ಯದ ಸಮಸ್ಯೆಗೆ ತಾತ್ಕಲಿಕ ಪರಿಹಾರ ಸಿಕ್ಕಂತಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಭಟನೆ ನಡೆಸುವ ಬದಲು ಶ್ರಮದಾನ ನಡೆಸಿ ಸಂಬಂದಪಟ್ಟವರ ಕಣ್ತೆರೆಸುವ ಪ್ರಯತ್ನವನ್ನು ಗ್ರಾಮಸ್ಥರು ಮಾಡಿದ್ದಾರೆ ಎಂದರು. ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ಜಿ.ಆನಂದ, ಪಂಜಿಕಲ್ಲು ಗ್ರಾಮಪಂಚಾಯತ್ ಅಧ್ಯಕ್ಷ ಸಂಜೀವ ಪೂಜಾರಿ, ಉದ್ಯಮಿ ಪ್ರಕಾಶ್ ಅಂಚನ್, ಗ್ರಾಮಪಂಚಾಯತ್ ಸದಸ್ಯರಾದ ಲಕ್ಷ್ಮೀನಾರಾಯಣ ಗೌಡ, ಕೃಷ್ಣರಾಜ ಜೈನ್, ಬಾಲಕೃಷ್ಣ ಪೂಜಾರಿ, ಚಿತ್ರ ಪ್ರವೀಣ್, ಹರೀಶ್ ತಾಕೋಡೆ, ಪ್ರಮುಖರಾದ ಕರುಣೇಂದ್ರ ಪೂಜಾರಿ, ಕೇಶವ ಪೂಜಾರಿ, ಮೋಹನದಾಸ, ಶೇಖರ ಪೂಜಾರಿ, ಶ್ರೀನಿವಾಸ ಗೌಡ, ಜಗದೀಶ ಪೂಜಾರಿ, ಜಗದೀಶ ಗೌಡ, ರಾಮಕೃಷ್ಣ ಹಾಜರಿದ್ದರು.



