ಕೈಕಂಬ: ಕಾಂಗ್ರೆಸ್ `ಸರ್ವರಿಗೂ ಸಮ ಬಾಳು ಸಮ ಪಾಲು’ ಎಂಬ ಸಿದ್ಧಾಂತಡಿ ಕೆಲಸ ಮಾಡುತ್ತಿದ್ದರೆ, ಬಿಜೆಪಿ ಮಹಾತ್ಮ ಗಾಂಧಿಯ ಕೊಲೆಗೈದ ಗೋಡ್ಸೆ ಸಂಸ್ಕೃತಿಯಡಿ ಸಮಾಜದಲ್ಲಿ ದ್ವೇಷ, ಅಸೂಯೆ ಹಾಗೂ ಕೋಮುಗಳ ಮಧ್ಯೆ ಕಿಚ್ಚಿಡುವ ಸಿದ್ಧಾಂತ ಹೊಂದಿದೆ ಎಂದು ರಾಜ್ಯಸಭಾ ಸದಸ್ಯ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ. ಕೆ.ಹರಿಪ್ರಸಾದ್ ಕಿಡಿಕಾರಿದ್ದಾರೆ.
ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೊಯಿದ್ದೀನ್ ಬಾವಾ ಪರ ಮಂಗಳವಾರ ಗುರುಪುರ-ಕೈಕಂಬದಲ್ಲಿ ಚುನಾವಣಾ ಪ್ರಚಾರ, ರೋಡ್ ಶೋ ನಡೆಸಿ ಬಳಿಕ ಅವರು ಮಾತನಾಡಿದರು.
ಮೋದಿಯ ಆಶ್ವಾಸನೆಯಂತೆ ಇದುವರೆಗೂ ದೇಶಕ್ಕೆ ಕಪ್ಪು ಹಣ ಬಂದಿಲ್ಲ. ಮತ್ತು ಬ್ಯಾಂಕ್ ಖಾತೆದಾರರಿಗೆ ಚಿಕ್ಕಸೂ ಜಮೆಯಾಗಿಲ್ಲ. ನೋಟು ಅಮಾನ್ಯೀಕರಣದಿಂದ ಜನರು ತತ್ತರಿಸಿ ಹೋಗಿದ್ದು, ದೇಶದ ಆರ್ಥಿಕತೆ ಕುಗ್ಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿದಿದ್ದರೂ ಕೇಂದ್ರ ಸರ್ಕಾರ ದೇಶದಲ್ಲಿ ತೈಲ ಬೆಲೆ ಇಳಿಸಿಲ್ಲ ಎಂದು ದೂರಿದರು.
ಸಿಎಂ ಸಿದ್ದರಾಮಯ್ಯರು ಕೈಗೊಂಡ ಹಸಿವು ಮುಕ್ತ ಯೋಜನೆ ರಾಜ್ಯದ ಜನರಲ್ಲಿ ನಗು ತಂದಿದೆ. `ಬೇಟಿ ಬಚಾವೋ, ಬೇಟಿ ಪಡಾವೋ’ ಎಂದು ಮೋದಿ ಹೇಳುತ್ತಿದ್ದರೂ, ಅವರ ಪಕ್ಷದ ಕೆಲವು ಶಾಸಕರು ಅತ್ಯಾಚಾರಿಗಳಾಗಿ ಹೊರಹೊಮ್ಮಿದ್ದಾರೆಂದು ಆರೋಪಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಮೊಯಿದ್ದೀನ್ ಬಾವ ಮಾತನಾಡಿ, ಮಂಗಳೂರು ಉತ್ತರ ಕ್ಷೇತ್ರದ ಅಭಿವೃದ್ಧಿ ಸರ್ಕಾರದಿಂದ ಸಾವಿರಾರು ಕೋಟಿ ರೂ. ಅನುದಾನ ತಂದಿದ್ದೇನೆ. ಕುಗ್ರಾಮಗಳಲ್ಲೂ ಕಾಂಕ್ರೀಟು ರಸ್ತೆ ನಿರ್ಮಾಣಗೊಂಡಿದೆ. ಮಂದಿರ, ಮಸೀದಿ, ಚರ್ಚುಳೆನ್ನದೆ ಎಲ್ಲ ಧರ್ಮೀಯರ ಕ್ಷೇತ್ರಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ತಂದಿದ್ದೇನೆ ಎಂದವರು, ಮತ್ತೊಂದು ಬಾರಿ ನನ್ನಾಯ್ಕೆ ನಿಮ್ಮಿಂದ ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಗುರುಪುರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳಿ, ಯು.ಪಿ. ಇಬ್ರಾಹೀಂ, ಪದಾಧಿಕಾರಿಗಳಾದ ಲುಕ್‍ಮ್ಯಾನ್, ಸುನೀಲ್, ಉದಯ ಭಟ್, ಹರೀಶ್ ಭಂಡಾರಿ, ಬಾಷಾ ಗುರುಪುರ, ಬಾಷಾ ಮಾಸ್ಟರ್, ಪುರುಷೋತ್ತಮ ಮಲ್ಲಿ, ಅಮೀನ್, ಗಣೇಶ್ ಪೂಜಾರಿ, ಉಮೈ ಬಾನು, ರುಕಿಯಾ, ಜಯಲಕ್ಷ್ಮೀ, ಮೊಹಮ್ಮದ್ ಮೋನು ಮತ್ತಿತರರು ಉಪಸ್ಥಿತರಿದ್ದರು.




